15 ವರ್ಷದಿಂದ ನಿರಂತರ ಹೋರಾಟ 
ರಾಯಚೂರು

ದೇಶ ಕಾದ ಸೈನಿಕ ನಿವೇಶನಕ್ಕೆ ಪರದಾಟ

ಪ್ರಮುಖ ಮುಖ್ಯಾಂಶಗಳು

  • 15 ವರ್ಷದಿಂದ ನಿರಂತರ ಹೋರಾಟ
  • ಹಣ ನೀಡಿದರು ದೊರೆತ್ತಿಲ್ಲ, ಭೂಮಿ, ನಿವೇಶನ
  • 3 ಎಕರೆ ಜಮೀನು ರದ್ದು
ರಾಯಚೂರು ದೇಶದ ಗಡಿಭಾಗಗಳಲ್ಲಿ ಜೀವದ ಹಂಗು ತೊರೆದು ಹೋರಾಡಿದ ರಾಯಚೂರು ಜಿಲ್ಲೆಯ ವೀರ ಸೈನಿಕರಿಗೆ ನಿವೇಶನ ಹಂಚಿಕೆ ಮಾಡುವ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ತೀವ್ರ ನಿರ್ಲಕ್ಷ್ಯ ವಹಿಸಿದ್ದು, ಹಣ ಪಾವತಿಸಿದರೂ ನಿವೇಶನ ನೀಡದೆ ಮಾಜಿ ಸೈನಿಕರನ್ನು ಗೊಳಾಡಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.
ದೇಶದ ವಿವಿಧ ಭಾಗದಲ್ಲಿ ಕಳೆದ 1962, 1965, 1971 ಮತ್ತು 1999 ರ ಯುದ್ಧಗಳಲ್ಲಿ ಪಾಲ್ಗೊಂಡ 389 ಕ್ಕೂ ಹೆಚ್ಚು ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿರುವ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವು ಕಳೆದ 15 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ, ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಮೊಂಡುತನದಿಂದಾಗಿ ನಿವೇಶನ ಸೇರಿದಂತೆ ಯಾವುದೇ ಸೌಲಭ್ಯಗಳು ಸಿಗದೆ ವಂಚಿತರಾಗಿದ್ದಾರೆ.

ಹಣ ನೀಡಿದರು ನಿವೇಶನ ಇಲ್ಲ

ಕಳೆದ 2021 ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರವು ಬೋಳಮಾನದೊಡ್ಡಿ ಪ್ರದೇಶದ ಬಡಾವಣೆಯ ಸರ್ವೆ ನಂ. 198 ರಲ್ಲಿ ಸಾರ್ವಜನಿಕ ಸೌಲಭ್ಯದಡಿ 565 ಚದರ್ ಮೀಟರ್ ಸಿಎ ಸೈಟನ್ನು ಸಂಘದ ಸ್ವಂತ ಕಚೇರಿ ಮತ್ತು ಸಮುದಾಯ ಭವನಕ್ಕಾಗಿ ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಈ ಸ್ಥಳದ ಶೇ.10 ರಷ್ಟು ಹಣವಾದ 2.37 ಲಕ್ಷ ರೂ.ಮೊತ್ತನ್ನು 2021 ಡಿಸೆಂಬರ್ 6 ರಂದು ಬ್ಯಾಂಕ್ ಮೂಲಕ ಪ್ರಾಧಿಕಾರಕ್ಕೆ ಪಾವತಿಸಿತ್ತು. ಆದರೆ ಚುನಾಯಿತ ಪ್ರತಿನಿಧಿಗಳ ರಾಜಕೀಯ ಒತ್ತಡಕ್ಕೆ ಮಣಿದಿರುವ ಪ್ರಾಧಿಕಾರವು ಇಂದಿನವರೆಗೂ ಸೈಟ್ ಹಸ್ತಾಂತರಿಸದೆ ಸೈನಿಕರನ್ನು ಕಚೇರಿಗೆ ಅಲೆದಾಡಿಸುತ್ತಿದೆ. ನೂರಾರು ಬಾರಿ ಕಚೇರಿ ಮೆಟ್ಟಿಲೇರಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಜಿ ಸೈನಿಕರು ಅಳಲು ತೋಡಿಕೊಂಡಿದ್ದಾರೆ.

3 ಎಕರೆ ಜಮೀನು ರದ್ದು

ಜಿಲ್ಲಾಡಳಿತದಿಂದ 2013 ರಲ್ಲಿ ಸಿದ್ರಾಂಪೂರ ಸೀಮಾಂತರದ ಸರ್ವೆ ನಂಬರ್ 106 ರಲ್ಲಿ 3 ಎಕರೆ ಜಮೀನನ್ನು ಸೈನಿಕರ ವಸತಿ ಮತ್ತು ಸಂಘದ ಕಟ್ಟಡಕ್ಕಾಗಿ ಅಂದಿನ ಜಿಲ್ಲಾಧಿಕಾರಿಗಳು ಹಂಚಿಕೆ ಮಾಡಿದ್ದರು. ಕಂದಾಯ ಮತ್ತು ಸರ್ವೆ ಇಲಾಖೆಯ ಎಲ್ಲಾ ಪ್ರಕ್ರಿಯೆಗಳು ಮುಗಿದು, ಪಹಣಿ ಕೂಡ ಸಂಘದ ಹೆಸರಿಗೆ ಬಂದಿತ್ತು. ಆದರೆ, ಆ ಜಮೀನು ಕಲ್ಲು ಬಂಡೆಗಳಿಂದ ಕೂಡಿದ್ದರಿಂದ ಮಾಜಿ ಸೈನಿಕರು ತಮ್ಮ ಸ್ವಂತ ಹಣದಿಂದ 5,75,000 ರೂ. ಖರ್ಚು ಮಾಡಿ ಭೂಮಿಯನ್ನು ಸಮತಟ್ಟು ಮಾಡಿಸಿದ್ದರು. ಆದರೆ, ದುರ್ದೈವವೆಂದರೆ 2018 ರಲ್ಲಿ ಬಂದ ಹೊಸ ಜಿಲ್ಲಾಧಿಕಾರಿಗಳು ಸಂಘಕ್ಕೆ ಯಾವುದೇ ನೋಟಿಸ್ ನೀಡದೆ, ಕನಿಷ್ಠ ಸಭೆಯನ್ನೂ ಕರೆಯದೆ ಏಕಪಕ್ಷೀಯವಾಗಿ ಈ ಜಮೀನು ಹಂಚಿಕೆಯನ್ನು ರದ್ದುಗೊಳಿಸಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳನ್ನು ಭೇಟಿಯಾಗಿ ವಿನಂತಿಸಿದರೂ ಯಾವುದೇ ನ್ಯಾಯ ಸಿಕ್ಕಿಲ್ಲ. ಇಷ್ಟೇ ಅಲ್ಲದೆ, 2022 ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಕಂದಾಯ ಸಚಿವ ಆರ್.ಅಶೋಕ ಅರಕೇರಾದಲ್ಲಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ರಾಯಚೂರು ಸೀಮಾಂತರದ ಸರ್ವೆ ನಂಬರ 928 ರಲ್ಲಿ ಮಾಜಿ ಸೈನಿಕರ ವಸತಿಗಾಗಿ ಘೋಷಿಸಲಾಗಿದ್ದ 5 ಎಕರೆ ಭೂಮಿಯ ಕಡತವೂ ಸಹ ಎಲ್ಲಾ ಇಲಾಖೆಗಳ ಅನುಮತಿ ಪಡೆದು ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ್ದರೂ, ಇಂದಿಗೂ ಧೂಳು ಹಿಡಿಯುತ್ತಿದೆ.

ಪಾಲನೆಯಾದಗ ನಿಯಮಗಳು

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಸೈನಿಕರಿಗೆ ಗರಿಷ್ಠ 10 ಗುಂಟೆಯಷ್ಟು ಕೃಷಿ ಜಮೀನು ಒದಗಿಸಲು ಅವಕಾಶವಿದೆ. ಕೃಷಿ ಜಮೀನು ಲಭ್ಯತೆ ಇಲ್ಲದಿದ್ದರೆ ಅದಕ್ಕೆ ಬದಲಾಗಿ ನಗರ ಪ್ರದೇಶದಲ್ಲಾದರೆ ಗರಿಷ್ಠ 1,200 ಚದರ ಅಡಿ, ಗ್ರಾಮೀಣ ಪ್ರದೇಶದಲ್ಲಾದರೆ ಗರಿಷ್ಠ 2,400 ಚದರ ಅಡಿಯಷ್ಟು ನಿವೇಶನ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ವಸತಿ ಯೋಜನೆಯ ಜಾರಿಯ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ಭೂಮಿಯನ್ನು ಮೀಸಲಿಡಲು ನಿಯಮ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಮಾತ್ರ ನಿವೇಶನ ನೀಡಲು ಅಧಿಕಾರಿಗಳು ಗಂಭೀರ ಪ್ರಯತ್ನ ನಡೆಸಿಲ್ಲ ಸರ್ಕಾರದ ನಿಯಮಗಳನ್ನು ಗಾಳಿಗೆ ತುರಲಾಗಿದೆಂದು ಸೈನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 15 ವರ್ಷದಲ್ಲಿ ಜಿಲ್ಲೆಯಲ್ಲಿ ನಿವೇನ ಹಾಗೂ ಭೂಮಿಗಾಗಿ ಹೋರಾಟ ಮಾಡಲಾಗುತ್ತಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸಿಎ ಸೈಟ್ ನೀಡಲು ಬ್ಯಾಂಕ್ ಮೂಲಕ ಹಣ ನೀಡಿದರು. ನಮಗೆ ಇರುವರೆಗೆ ನಿವೇಶನ ಹಸ್ತಾಂತರ ಮಾಡಿಲ್ಲ.
ಚೆನ್ನಾರೆಡ್ಡಿ ಅಧ್ಯಕ್ಷ ಮಾಜಿ ಸೈನಿಕರ ಸಂಘ
ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರವು ಬೋಳಮಾನದೊಡ್ಡಿ ಪ್ರದೇಶದ ಬಡಾವಣೆಯ ಸಾರ್ವಜನಿಕ ಸೌಲಭ್ಯದಡಿ 565 ಚದರ್ ಮೀಟರ್ ಸಿಎ ಸೈಟನ್ನು ಮಾಜಿ ಸೈನಿಕರಿಗೆ ವಿತರಣೆ ಕುರಿತು ಮಾಹಿತಿ ಬಂದಿದ್ದು, ಸಂಪೂರ್ಣ ಮಾಹಿತಿ ಪಡೆದು ಒಂದು ವಾರದಲ್ಲಿ ನಿವೇಶನವನ್ನು ನೀಡಲಾಗುವುದು.
ಎಸ್.ಪೂವಿತಾ ಜಿಲ್ಲಾಧಿಕಾರಿ ರಾಯಚೂರು.