ಲಿಂಗಸುಗೂರು ವೀವಿ ಸಂಘದ ಸಭಾಂಗಣದಲ್ಲಿ ಆಟ-ಕೂಟ ಮಕ್ಕಳ ರಂಗ ಶಿಬಿರದ ಸಮಾರೋಪ ಸಮಾರಂಭವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ ನಾಗರಾಜ ಮೂರ್ತಿ ತಬಲಾ ಬಾರಿಸಿ ಉದ್ಘಾಟಿಸಿದರು.
ಲಿಂಗಸುಗೂರು: ಮಕ್ಕಳನ್ನು ರಂಗಭೂಮಿ ಕಲೆಯಲ್ಲಿ ತೊಡಗಿಸಿಕೊಳ್ಳಲು ಪಾಲಕರು ಪ್ರೋತ್ಸಾಹ ನೀಡಬೇಕು. ಇದರಿಂದ ಅವರ ಮನಸ್ಸು ವಿಕಸನಗೊಳ್ಳಲು ಸಾಧ್ಯವಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ. ನಾಗರಾಜ ಮೂರ್ತಿ ಹೇಳಿದರು.
ಪಟ್ಟಣದ ವೀವಿ ಸಂಘದ ಸಭಾಂಗಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ರಂಗಧ್ವನಿ, ಜನರಂಗ, ಶ್ರೀ ವಿಜಯಲಕ್ಷ್ಮೀ ಮಹಿಳಾ ಸ್ವ ಸಹಾಯ ಸಂಘ ಮತ್ತು ಅಮರೇಶ್ವರ ವಿದ್ಯಾವರ್ಧಕ ಸಂಘದಿಂದ ಹಮ್ಮಿಕೊಂಡಿದ್ದ ಆಟ-ಕೂಟ ಮಕ್ಕಳ ರಂಗಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಜಾತಿ, ಧರ್ಮದ ಹೆಸರಿನಲ್ಲಿ ಸ್ವಾರ್ಥ ಅಧಿಕಾರದ ಲಾಲಸೆ ಹೆಚ್ಚುತ್ತಿದೆ. ಧರ್ಮದ ಹೆಸರಿನಲ್ಲಿ ಮಕ್ಕಳ ಮನಸ್ಸು ದುರ್ಬಲಗೊಳಿಸಬಾರದು. ರಂಗಭೂಮಿ ಎಂಬುದು ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಮತ್ತು ಪ್ರತಿಭೆಗಳನ್ನು ಗುರುತಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಈಗ ರಂಗಭೂಮಿ ಕಲೆ ನಿರ್ಲಕ್ಷೃಕ್ಕೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ವೀವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ, ಉಪನ್ಯಾಸಕ ಮಹಾಂತೇಶ ಮಸ್ಕಿ, ಪುರಸಭೆ ಉಪಾಧ್ಯಕ್ಷ ಮಹ್ಮದ ರಫಿ, ಸಂತೋಷ ಸೊಪ್ಪಿಮಠ, ಪ್ರಮುಖರಾದ ಡಾ.ಮಹಾಂತೇಶ ಸೋಮಲಾಪುರ, ಪಂಪಣ್ಣ ಗುಂಡಳ್ಳಿ, ವೀರೇಶಗೌಡ ಅಮರಾವತಿ, ನರೇಶ ರೆಡ್ಡಿ ಮುನ್ನೂರು, ವೀರಭದ್ರಪ್ಪ ಸೋಮಲಾಪುರ, ನಾಗರೆಡ್ಡಿ ನಗನೂರು ಇದ್ದರು.