ಐತಿಹಾಸಿಕ ಮುದಗಲ್ ಮೊಹರಂ ಹಬ್ಬದ ನಿಮಿತ್ತ ಹಸನ್-ಹುಸೇನ್ ಆಲಂಗಳ ಪರಸ್ಪರ ಭೇಟಿ ವೇಳೆ ಸೇರಿದ್ದ ಭಕ್ತರು.
- ಐತಿಹಾಸಿಕ ಮುದಗಲ್‌ನಲ್ಲಿ ಆಲಂ ದೇವರುಗಳು ಮುಖಾಮುಖಿ
- ವಿಜೃಂಭಣೆಯಿಂದ ದಫನ್ ಕಾರ್ಯ
ಮುದಗಲ್: ಭಾವೈಕ್ಯಕ್ಕೆ ಹೆಸರಾದ ಐತಿಹಾಸಿಕ ಮುದಗಲ್ ಮೊಹರಂ ಹಬ್ಬಕ್ಕೆ ಶುಕ್ರವಾರ ವೈಭವದಿಂದ ತೆರ ಬಿದ್ದಿತು.
ಪಟ್ಟಣದ ಕಿಲ್ಲಾ, ಮೇಗಳಪೇಟೆ, ವೆಂಕಟರಾನಪೇಟೆ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಪ್ರತಿಷ್ಠಾಪಿಸಿದ್ದ ಆಲಂಗಳನ್ನು ಸಕಲ ವಾದ್ಯ ಮೇಳಗಳೊಂದಿಗೆ ಸವಾರಿ ಮೂಲಕ ಐತಿಹಾಸಿಕ ಎರಡು ಸುತ್ತಿನ ಕೋಟೆ ಮುಂಭಾಗಕ್ಕೆ ಮೆರವಣಿಗೆ ಮೂಲಕ ತರಲಾಯಿತು. ಆದರೆ, ಆಲಂಗಳು ಕೋಟೆ ಮಂಭಾಗಕ್ಕೆ ತಡವಾಗಿ ಆಗಮಿಸಿದ್ದು ಹಾಗೂ ಮಳೆ ಸುರಿದ ಕಾರಣ ಭಕ್ತಗಣ ಚದುರಿ ಹೋದ ಹಿನ್ನೆಲೆಯಲ್ಲಿ ಮೊಹರಂ ಕೊಂಚ ಮಂಕಾಯಿತು.
ನಂತರ ಪರಸ್ಪರ ಆಲಂಗಳ ಭೇಟಿ ಕಾರ್ಯಕ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಭಕ್ತರು ಬಾಳೆಹಣ್ಣು, ಉತ್ತತ್ತಿ ಹಾಗೂ ಇತರ ಸಿಹಿ ಪದಾರ್ಥಗಳನ್ನು ಆಲಂಗಳ ಮೇಲೆ ತೂರಿ ಭಕ್ತಿ ಸಮರ್ಪಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಮೊಹರಂ ಹಬ್ಬಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಕಣ್ತುಂಬಿಸಿಕೊಂಡರು.
ಪೊಲೀಸ್ ಸರ್ಪಗಾವಲು
ಐತಿಹಾಸಿಕ ಮುದಗಲ್ ಮೊಹರಂ ಹಬ್ಬ ಪೊಲೀಸ್ ಸರ್ಪಗಾವಲಿನಲ್ಲಿ ಶುಕ್ರವಾರ ಸಂಪನ್ನವಾಯಿತು. ಎಸ್ಪಿ ಅರುಣಾಂಗ್ಷು ಗಿರಿ ನೇತೃತ್ವದಲ್ಲಿ ಎಎಸ್ಪಿ ಕುಮಾರಸ್ವಾಮಿ ಸೇರಿದಂತೆ 2 ಡಿವೈಎಸ್ಪಿ, 13 ಸಿಪಿಐ, 13 ಪಿಎಸ್‌ಐ, 62 ಗೃಹ ರಕ್ಷಕ ದಳದ ಸಿಬ್ಬಂದಿ, 220 ಪ್ರೊಬೇಷನರಿ ಪಿಎಸ್‌ಐಗಳು, ಮೂರು ಕೆಎಸ್‌ಆರ್‌ಪಿ ತುಕಡಿ, 4 ಡಿಆರ್ ತುಕಡಿ, 150 ಸಿವಿಲ್ ಸಿಬ್ಬಂದಿ ಸೇರಿದಂತೆ 650ಕ್ಕೂ ಪೊಲೀಸರು ಭದ್ರತೆ ಒದಗಿಸಿದ್ದರು. ಆಲಂಗಳ ಪರಸ್ಪರ ಭೇಟಿ ಕಾರ್ಯಕ್ರಮ ಪೂರ್ಣಗೊಳಿಸಿ ದಫನ್‌ಗೆ ತೆರಳುವ ಮಾರ್ಗದುದ್ದಕ್ಕೂ 20ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.