ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ ಧರ್ಮಸಿಂಗ್ ಅವರು ಶನಿವಾರ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್,ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತ ಕುಮಾರ, ಜಿಲ್ಲಾಧಿಕಾರಿನ ಪೂವಿತಾ ಎಸ್. ಜಿಪಂ ಸಿಇಓ ಈಶ್ವರ ಕುಮಾರ ಕಾಂದೊ, ಎಸ್ಪಿ ಅರುಣಾಂಗ್ಶು ಗಿರಿ, ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಇದ್ದರು.
- ಸಣ್ಣ ನೀರಾವರಿ ಸಚಿವ ಡಾ.ಅಜಯ್ ಅವರಿಂದ ರಾಷ್ಟ ಧ್ವಜಾರೋಹಣ
80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಮಹಾತ್ಮಾ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಣ್ಣ ನೀರಾವರಿ ಡಾ.ಅಜಯ್ ಧರ್ಮಸಿಂಗ್ ಅವರು ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ಯೃ ಸಂಗ್ರಾಮದ ಸಮಯದಲ್ಲಿ ತಮ್ಮೆಲ್ಲಾ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ಸಮರ್ಪಣ ಭಾವದಿಂದ ಭಾರತಮಾತೆಯ ದಾಸ್ಯದ ವಿಮೋಚನೆಗಾಗಿ ಶ್ರಮಿಸಿದ ಜಿಲ್ಲೆಯ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ನಾವು ಗೌರವದಿಂದ ಕಾಣಬೇಕು. ದೇಶದ ನಾಗರಿಕರಾಗಿ ಭವ್ಯ ಪರಂಪರೆ, ಸಂಸ್ಕೃತಿ ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಸಾಗಬೇಕಾಗಿದೆ. ಜಾತಿ, ಭಾಷೆ, ಪಂಗಡಗಳ ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿ ಬಲಿಷ್ಟ ರಾಷ್ಟ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವು ಒಟ್ಟಾಗಿ ಶ್ರಮಿಸೋಣ ಎಂದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆಯು 218 ಮಿ.ಮಿ ಇದ್ದು, ವಾಸ್ತವಿಕವಾಗಿ ಈವರೆಗೂ 156 ಮಿ.ಮಿ. ರಷ್ಟು ಮಳೆಯಾಗಿದ್ದು, ಶೇ.29ರಷ್ಟು ಮಳೆ ಜಿಲ್ಲಾಧ್ಯಂತ ಕೊರತೆಯಿರುತ್ತದೆ. ಅದರಲ್ಲಿ ಸಿಂಧನೂರು, ಅರಕೇರಾ, ಮಸ್ಕಿ, ದೇವದುರ್ಗ ಹಾಗೂ ಲಿಂಗಸೂಗೂರು ತಾಲೂಕುಗಳಲ್ಲಿ ಹೆಚ್ಚಿನ ಕೊರತೆ ಕಂಡುಬಂದಿರುತ್ತದೆ.
ಜಿಲ್ಲೆಯಲ್ಲಿ ಜುಲೈ ಕೊನೆಯ ವಾರ ಮಳೆಯಾಗಿದ್ದು ಬಿತ್ತನೆಯಾದ ನಂತರ ಬೆಳೆಗಳ ಬೆಳವಣಿಗೆಗೆ ಅನುಕೂಲವಾಗುವಂತೆ ಮಳೆಯಾಗಿರುವುದಿಲ್ಲ. ಒಟ್ಟು ಮುಂಗಾರು ಹಂಗಾಮಿಗೆ 5,71,575 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿಯನ್ನು ಹೊಂದಿದ್ದು, ಈವರೆಗೂ 2,73,688 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಸತತ ನಾಲ್ಕು ವಾರಗಳ ಕಾಲ ಮಳೆಯಾಗದೆ ಅತೀ ಕಡಿಮೆ ಮಳೆ ಆಗಿರುವುದರಿಂದ ಬೆಳೆಗಳು ಬಿತ್ತನೆಗೊಂಡು ಬೆಳೆವಣಿಗೆ ಹಂತದಲ್ಲಿ ತೀವ್ರ ತೇವಾಂಶದ ಕೊರತೆಗೆ ಒಳಗಾಗಿರುತ್ತವೆ.
ಜಿಲ್ಲೆಯ ವಿವಿಧ ತಾಲೂಕುಗಳಿಗೆ ಇಚೇಗೆ ಜಿಲ್ಲಾಡಳಿತದ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಕೂಲಂಕೂಶವಾಗಿ ಪರಿಶೀಲಿಸಲಾಗಿದ್ದು, ಪರಿಶೀಲನೆಯಲ್ಲಿ ಗಮನಿಸಿದ ಅಂಶಗಳ ಕುರಿತು ಸರ್ಕಾರಕ್ಕೆ ವಿವರವಾದ ವರದಿಯನ್ನು ಸೂಕ್ತ ಕ್ರಮಕ್ಕಾಗಿ ಸಲ್ಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2026-27 ರಲ್ಲಿ 119,589 ರೈತರು ವಿಸ್ತೀರ್ಣ 133043.07 ಹೆಕ್ಟರ್ ಪ್ರದೇಶಕ್ಕೆ ನೊಂದಾಯಿಸಿರುತ್ತಾರೆ. 2025-26ರ ಬೆಳೆ ವಿಮೆ ಕಂತು ಪಾವತಿಸುವ ಅವಧಿ ವಿಸ್ತರಿಸಲು ಹಾಗೂ ಮಾರ್ಗಸೂಚಿಗಳನ್ನು ಸರಳೀಕರಿಸಲು ಅಗತ್ಯ ಕ್ರಮವಹಿಸಲಾಗುತ್ತಿದೆ. ಪ್ರಕೃತಿ ವಿಕೋಪದ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ 2.51 ಕೋಟಿ ರೂ. ಮತ್ತು ತಾಲೂಕು ತಹಶೀಲ್ದಾರರ್ ಖಾತೆಯಲ್ಲಿ 2.43 ಕೋಟಿ ರೂ. ಸೇರಿದಂತೆ ಒಟ್ಟು 4.94 ಕೋಟಿ ರೂ. ಜಿಲ್ಲೆಯಲ್ಲಿ ಲಭ್ಯವಿದ್ದು, ತುರ್ತು ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು. ಮುಖ್ಯಮಂತ್ರಿಗಳು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತುರ್ತು ಕಾಮಗಾರಿಗಳಿಗಾಗಿ ಪ್ರತೀ ತಾಲ್ಲೂಕಿಗೆ 100 ಲಕ್ಷ ರೂ. ಅನುದಾನ ಘೋಷಿಸಿರುತ್ತಾರೆ ಎಂದರು.
ನಂತರ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪರೇಡ್‌ನಲ್ಲಿ ಭಾಗವಹಿಸಿದ ತಂಡಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ಆಯೋಜನೆ ಮಾಡಿದ 80ನೇ ಸ್ವತಂತ್ರೋತ್ಸವ ಕಾರ್ಯಕ್ರಮ ರಾಜಕೀಯ ಪಕ್ಷಗಳ ಕಾರ್ಯಕರ್ತರ ವೇದಿಕೆಯಾಗಿ ಕಂಡುಬಂದಿತ್ತು. ವೇದಿಕೆಯಲ್ಲಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮೀಸಲಿದ್ದ ಸ್ಥಳದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಧಿಕಾರಿಗಳು ಕೂರಲು ಸಹ ಅವಕಾಶ ನೀಡದೆ ಕುಳಿತುಕೊಂಡಿದ್ದರಿಂದ ವೇದಿಕೆ ಪಕ್ಕದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಅಸಹಾಯಕರಾಗಿ ಪಕ್ಕದಲ್ಲಿ ನಿಂತಿರುವುದು ಕಂಡುಬಂದಿತ್ತು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್,ತಹಶಿಲ್ದಾರ್ ಸುರೇಶ ವರ್ಮಾ, ಜಿಲ್ಲಾ ಸಚಿವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಪಾಟೀಲ್ ಸೇರಿದಂತೆ ಅನೇಕರು ಇದ್ದರು.