ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಲ್ಲಿ 729ಕ್ಕೂ ಅಧಿಕ ವಿವಿಧ ಅಪರಾಧಗಳಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶುಗಿರಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಜನವರಿಯಿಂದ ಮಾರ್ಚ್ ಅಂತ್ಯದಲ್ಲಿ ಅಕ್ರಮ ಮರಳು ಸಾಗಾಟ, ಇಸ್ಪೀಟ್, ಮಟ್ಕಾ, ಜೂಜಾಟ ಸೇರಿದಂತೆ ಹಲವು ಸಂಘಟಿತ ಅಪರಾಧಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಸ್ಪಿಟ್ ದಂದೆಯ 105 ಪ್ರಕರಣಗಳು, ಮಟ್ಕಾ 172 ಪ್ರಕರಣಗಳು, ಜೂಜಾಟ 22, ಕೋಳಿ ಪಂದ್ಯ 18, ಅಗತ್ಯ ಸರಕುಗಳ ಕಾಯ್ದೆಯಡಿ 13, ಅಕ್ರಮ ಮರಳು ಗಣಿಗಾರಿಕೆ 207, ಅಬಕಾರಿ 121, ಎನ್‌ಡಿಪಿಎಸ್ ಗಾಂಜಾದ 71 ಪ್ರಕರಣಗಳನ್ನು ದಾಖಲಿಸಿಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಬಕಾರಿ ಇಲಾಖೆಯಿಂದ 121 ಪ್ರಕರಣಗಳಲ್ಲಿ 23 ಪ್ರಕರಣಗಲು ಅಕ್ರಮ ಸೇಂದಿ ಮಾರಾಟದ್ದಾಗಿದ್ದು, 23 ಪ್ರಕರಣಗಳಲ್ಲಿ 832 ಲೀಟರ್ ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಜತೆಗೆ 71 ಗಾಂಜಾ ಪ್ರಕರಣಗಳಲ್ಲಿ 8 ಪ್ರಕರಣಗಳಲ್ಲಿ 11 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 4.35 ಕೆ.ಜಿ ಗಾಂಜಾವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲೂ ಯಾವುದೇ ಅಕ್ರಮ ಚಟುವಟಿಕೆಗಳು ಮತ್ತು ಅಪರಾಧಗಳು ಕಂಡುಬಂದಲ್ಲಿ ಪೊಲೀಸ್ ತುರ್ತು ಸಹಾಯವಾಣಿ 112ಗೆ ಸಂಪರ್ಕಿಸಬಹುದಾಗಿದೆ ಎಂದರು.