ಸಿಂಧನೂರು ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು.
ಸಿಂಧನೂರು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿದ್ದುಪಡಿಗೊಳಿಸಿ ವಿಬಿ ಜಿ ರಾಮ್ ಜಿ ಎಂದು ರೂಪಿಸಿರುವ ಕಾಯ್ದೆ ಶೇ.40 ಬಡಜನರ ಬದುಕಿಗೆ ಮಾರಕವಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಸ್ಥಳೀಯ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದಿಂದ ಹಮ್ಮಿಕೊಂಡಿದ್ದ ನರೇಗಾ ಬಚಾವ್ ಸಂಗ್ರಾಮ್ ಆಂದೋಲನದ ಅಂಗವಾಗಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ವಿಬಿ ಜಿ ರಾಮ್ ಜಿ ರದ್ದುಪಡಿಸಬೇಕೆಂದು ಒತ್ತಾಯಿಸಿ ದೇಶದಾದ್ಯಂತ ನರೇಗಾ ಬಚಾವ್ ಸಂಗ್ರಾಮ್ ಆಂದೋಲನಕ್ಕೆ ಕರೆ ನೀಡಲಾಗಿದೆ. ಜ.15 ರಿಂದ 17 ರವರೆಗೆ ಒಂದು ದಿನ ತಾಲೂಕು ಕಚೇರಿ ಮುಂದೆ ಸಾಂಕೇತಿಕ ನಿರಶನ, ಜ.18 ರಿಂದ 29 ರವರೆಗೆ ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಭೆ, ಜ.27ರಿಂದ ಫೆ.2 ರವರೆಗೆ 7 ದಿನ 5 ರಿಂದ 10 ಕಿ.ಮೀ ವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷ ಶ್ರೀದೇವಿ ಶ್ರೀನಿವಾಸ, ಮುಖಂಡರಾದ ಆರ್.ತಿಮ್ಮಯ್ಯ ನಾಯಕ, ಲಿಂಗರಾಜ ಪಾಟೀಲ್ ಹಂಚಿನಾಳ ಕ್ಯಾಂಪ್, ರಂಗನಗೌಡ ಗೊರೇಬಾಳ, ಅಶೋಕ ಉಮಲೂಟಿ, ಎನ್. ಅಮರೇಶ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್ ಇತರರು ಇದ್ದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಅನಿಲಕುಮಾರ ವೈ. ನಿರೂಪಿಸಿದರು.