- ಸರ್ಕಾರದ
- ಪ್ರತಿನಿಧಿಯಾಗಿ
- ಜಲಾಶಯಕ್ಕೆ
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಜೂನ್ ವೇಳೆಗೆ 33 ಕ್ರಸ್ಟ್‌ಗೇಟ್ ಅಳವಡಿಕೆ ಅನುಮಾನ ಮೂಡಿಸಿದೆ ಎಂದು ಮಾಜಿ ಸಚಿವ ವೆಂಕಟರಾವ ನಾಡಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಲಾಶಯ ಗೇಟ್‌ಗಳ ತಜ್ಞ ಕನ್ನಯ್ಯ ನಾಯ್ಡು ಆಂಧ್ರಪ್ರದೇಶ ಸರ್ಕಾರದ ಪ್ರತಿನಿಧಿಯಾಗಿ ಜಲಾಶಯಕ್ಕೆ ಭೇಟಿ ನೀಡಿ ಗೇಟ್‌ಗಳ ಅಳವಡಿಕೆ ಪರಿಶೀಲನೆ ಮಾಡಿದ್ದಾರೆ.
ಕಾಮಗಾರಿ ತೀರಾ ನಿಧನವಾಗುತ್ತಿದೆ. 2-3 ತಂಡಗಳನ್ನು ಮಾಡಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ. ಗೇಟ್‌ಗಳ ಅಳವಡಿಕೆಗೆ ಆಂಧ್ರಪ್ರದೇಶ ಸರ್ಕಾರ 20ಕೋಟಿ ರೂ. ಅನುದಾನ ನೀಡಿದ್ದು, ರಾಜ್ಯ ಸರ್ಕಾರವೂ 10 ಕೋಟಿ ಹಣ ನೀಡಿತ್ತು. ಈಗ ಸಿಬ್ಬಂದಿ ವೇತನ, ನಿರ್ವಹಣೆಗೆ ಆಂಧ್ರಪ್ರದೇಶ ಸರಕಾರ 35 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ನೀಡಿದೆ.
ಈ ಹಣದಲ್ಲಿ 10 ಕೋಟಿ ಕಡಿತಗೊಳಿಸಿ, 25 ಕೋಟಿ ರೂ. ಮಾತ್ರ ತುಂಗಭದ್ರಾ ಮಂಡಳಿಗೆ ನೀಡಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ಸರ್ಕಾರದ ಲೋಪ ಮರೆಮಾಚಲು ಜಲಾಶಯದ ವಿಚಾರದಲ್ಲಿ ಅಸಮರ್ಪಕ ಮಾಹಿತಿ ನೀಡುತ್ತಿದ್ದು, ರೈತರನ್ನು ದಾರಿತಪ್ಪಿಸುತ್ತಿದ್ದಾರೆ. ಗುತ್ತೇದಾರರಿಗೆ ಹಣ ನೀಡದಿದ್ದರೆ ಕ್ರಸ್ಟ್‌ಗೇಟ್ ಅಳವಡಿಕೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಗ್ರಾಮೀಣ ಭಾಗದಲ್ಲಿ ಪ್ರಸ್ತುತ 10ದಿನಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಬೇಸಿಗೆಯಲ್ಲಿ ಕುಡಿವ ನೀರಿನ ಹಾಹಾಕಾರ ಉಂಟಾಗಲಿದೆ. ಜಲಾಶಯದಲ್ಲಿ ನೀರಿದೆ. ಮಾರ್ಚ್ ಅಂತ್ಯದಲ್ಲಿ ಇನ್ನೊಮ್ಮೆ ಕೆರೆಗಳನ್ನು ತುಂಬಿಸಿದರೆ ಬೇಸಿಗೆಯಲ್ಲಿ ನೀರು ಕೊಡಬಹುದು. ಅವರ ಬದಲಾಗಿ ಈಗ ತುಂಬಿಸಲಾದ ಕೆರೆ ನೀರನ್ನು ಜುಲೈವರೆಗೆ ಕೊಡಲು ಸಾಧ್ಯವೇ ? ಕಾಲುವೆಗಳ ರಿಪೇರಿಗಳಿದ್ದರೆ ಏಪ್ರೀಲ್, ಮೇ, ಜೂನ್‌ನಲ್ಲಿ ಮಾಡಿಕೊಳ್ಳಬೇಕೆಂದು ತಿಳಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಮುಖಂಡರಾದ ವೆಂಕೋಬ ಕಲ್ಲೂರು, ಎಸ್.ಪಿ.ಟೇಲರ್, ಜಿ.ಸತ್ಯನಾರಾಯಣ, ಎಂ.ಡಿ.ಆಸೀಪ್ ಇತರರು ಇದ್ದರು.