ಗಬ್ಬೂರಿನಲ್ಲಿ ನಕಲಿ ಹತ್ತಿ ಬಿತ್ತನೆ ಬೀಜದ ಪ್ಯಾಕೇಟ್ ಹಾಗೂ ಕಲರ್ ಬಕೆಟ್.
ದೇವದುರ್ಗ: ತಾಲೂಕಿನ ಗಬ್ಬೂರು ಪಟ್ಟಣದ ಹನುಮಾಪುರ ಕ್ಯಾಂಪ್‌ನಲ್ಲಿ ನಕಲಿ ಹತ್ತಿ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಕೃಷಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಲು ಜಂಟಿಯಾಗಿ ಭಾನುವಾರ ದಾಳಿ ನಡೆಸಿದ್ದಾರೆ.
ಆಂಧ್ರ ಮೂಲದ ಶ್ರೀನಿವಾಸ್ ರೆಡ್ಡಿ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ಸುಮಾರು 4.65 ಲಕ್ಷ ರೂ. ಮೌಲ್ಯದ 2.45ಕ್ವಿಂಟಾಲ್ ನಕಲಿ ಹತ್ತಿ ಬಿತ್ತನೆ ಬೀಜವನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ. ದಾಳಿ ವೇಳೆ ಕೃಷಿ ಇಲಾಖೆ ಉಪನಿರ್ದೇಶಕಿ ಶರಣಪ್ಪ, ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ ಹಾಗೂ ರೈತ ಸಂಘದ ಮುಖಂಡರು ಇದ್ದರು.
ವ್ಯಾಪಕ ಜಾಲ: ತಾಲೂಕು ಹತ್ತಿ ಬೆಳೆಯಲು ಹೇಳಿಮಾಡಿಸಿದ ಪ್ರದೇಶವಾಗಿದೆ. ಶೇ.50 ಕೃಷಿ ಭೂಮಿಯಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ದಂಧೆಕೋರರು ಆಂಧ್ರದಿಂದ ಲೂಸ್ ಬೀಜಗಳನ್ನು ತಂದು ವಿವಿಧ ಬಣ್ಣಗಳನ್ನು ಮಿಶ್ರಣ ಮಾಡಿ ಪ್ಯಾಕೆಟ್‌ಗೆ ತುಂಬಿಸಿ ರೈತರಿಗೆ ಮಾರುವ ದಂಧೆ ವ್ಯಾಪಕವಾಗಿದೆ.
ಗಬ್ಬೂರು, ಜಾಲಹಳ್ಳಿ, ಅರಕೇರಾ, ಮಸರಕಲ್ ಸೇರಿ ವಿವಿಧೆಡೆ ಈ ದಂಧೆ ನಡೆಯುತ್ತಿದೆ. 450 ಗ್ರಾಂ ಪ್ಯಾಕೇಟ್‌ಗೆ 500 ರಿಂದ 900ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕೆಲ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಳಿಗೆ ಮಾಲೀಕರು ಕೈಜೋಡಿಸಿದ್ದಾರೆ ಎನ್ನಲಾಗಿದೆ. ರಸಗೊಬ್ಬರ ಪಡೆಯಲು ಈ ನಕಲಿ ಬಿತ್ತನೆ ಬೀಜ ಕಡ್ಡಾಯವಾಗಿ ಪಡೆಯಬೇಕು ಎನ್ನುವ ಕಂಡಿಷನ್ ಹಾಕುತ್ತಿವೆ. ಇದು ಜಾಲ ವಿಸ್ತರಣೆಗೆ ಪ್ರಮುಖ ಕಾರಣವಾಗಿದೆ ಎಂದು ಪ್ರಗತಿಪರ ರೈತ ಮುಖಂಡ ಶಾಂತಕುಮಾರ ಆರೋಪಿಸಿದ್ದಾರೆ.