ನಾರಾಯಣಪುರ ಜಲಾಶಯದಿಂದ 1.11ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ದೇವದುರ್ಗ ತಾಲೂಕಿನಲ್ಲಿ ಕೃಷ್ಣಾನದಿ ಭೋರ್ಗೆರೆಯುತ್ತಿರುವುದು. 
ರಾಯಚೂರು

ಕೃಷ್ಣಾನದಿಗೆ 1.11ಲಕ್ಷ ಕ್ಯೂಸೆಕ್ ನೀರು

ದೇವದುರ್ಗ: ಮಹಾರಾಷ್ಟ್ರ ಹಾಗೂ ಕೃಷ್ಣಾ ಮೇಲ್ದಂಡೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಬುಧವಾರ ತಡರಾತ್ರಿ ಸುಮಾರು 1.11ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ಇದರಿಂದ ಕೃಷ್ಣಾ ಕೊಳ್ಳದಲ್ಲಿ ಹೈಅಲರ್ಟ್ ಘೋಷಿಸಿದ್ದು, ನೆರೆಯ ಆತಂಕ ಎದುರಾಗಿದೆ.
ಜಲಾಶಯ ಭರ್ತಿಯಾಗಿದ್ದರಿಂದ ಒಳಬರುವ ನೀರು ಯಥಾವತ್ತಾಗಿ ನದಿಗೆ ಹರಿಸಲಾಗುತ್ತಿದೆ. ಬುಧವಾರ ಬೆಳಗ್ಗೆ 89 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿತ್ತು. ನಂತರ ಮಧ್ಯಾಹ್ನ 95 ಸಾವಿರ, ಸಂಜೆ 1.03 ಲಕ್ಷ ಹಾಗೂ ಮಧ್ಯರಾತ್ರಿ 1,11,064 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಗುರುವಾರ ಬೆಳಗ್ಗೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ತೀರದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. 
ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಎರಡನೇ ದಿನವೂ ಜಲದಿಗ್ಬಂಧನಕ್ಕೆ ಒಳಗಾಗಿತ್ತು.
ಅಲ್ಲದೆ ವೀರಗೋಟದ ಮೌನಲಿಂಗೇಶ್ವರ, ಅಂಜಳದ ಬಸವೇಶ್ವರ ದೇವಸ್ಥಾನ, ಕೊಪ್ಪರದ ಲಕ್ಷ್ಮೀನರಸಿಂಹ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಆಂಜನೇಯ ದೇವಸ್ಥಾನ, ಅರಸಿಣಿಗಿ ಅಣೆಮಲ್ಲೇಶ್ವರ ದೇವಾಲಯ ಹಾಗೂ ಗೂಗಲ್ ಅಲ್ಲಪ್ರಭು ದೇವಸ್ಥಾನದ ಮೆಟ್ಟಿಲುವರೆಗೆ ನೀರು ಬಂದಿದೆ. 
ಭಕ್ತರ ಬಗ್ಗೆ ಎಚ್ಚರಿಕೆವಹಿಸಿದ್ದು ಗ್ರಾಪಂ ಆಡಳಿತ ಡಂಗುರ ಸಾರಿದೆ. ನದಿಗೆ ಬಿಡುವ ನೀರು 1.50 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾದರೆ ಸುಮಾರು 5ಸಾವಿರ ಜಮೀನಿಗೆ ನೀರು ನುಗ್ಗುವ ಸಾಧ್ಯತೆಯಿದೆ. ನರೆಬಾಧಿತ ಗ್ರಾಮಗಳೆಂದು ಗುರುತಿಸಿದ ಅಂಜಳ, ಹಿರೇರಾಯಕುಂಪಿ, ಕೊಪ್ಪರ, ಕರ್ಕಿಹಳ್ಳಿ, ಲಿಂಗದಹಳ್ಳಿ, ಮುದಗೋಟ, ಪರ್ತಪುರ, ಬಸವಂತಪುರ, ಮ್ಯಾದರಗೋಳ, ಹೂವಿನಹೆಡಗಿ, ಜೋಳದಹೆಡಗಿ ಸೇರಿ ವಿವಿಧೆಡೆ ತಾಲೂಕು ಆಡಳಿತ ಮುನ್ನೆಚ್ಚರಿಕೆವಹಿಸಿದೆ. ಇದಲ್ಲದೆ ನದಿದಂಡೆ ಮೇಲಿನ 42 ಹಳ್ಳಿಗಳನ್ನು ಗುರುತಿಸಿದ್ದು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ರೈತರು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.
ನಾರಾಯಣಪುರ ಜಲಾಶಯ ಸಂಗ್ರಹ ಸಾಮರ್ಥ್ಯ 33.31ಟಿಎಂಸಿ ಇದ್ದು, ಸದ್ಯ 30.13ಟಿಎಂಸಿ ನೀರಿನ ಸಂಗ್ರಹವಿದೆ. 95,043 ಕ್ಯೂಸೆಕ್ ಒಳಹರಿವಿದ್ದು, 1.11ಲಕ್ಷ ಕ್ಯೂಸೆಕ್ ನದಿಗೆ ಹರಿಸಲಾಗುತ್ತಿದೆ. ಇನ್ನು 123ಟಿಎಂಸಿ ಅಡಿ ಸಾಮರ್ಥ್ಯದ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಸುಮಾರು 1ಲಕ್ಷ ಕ್ಯೂಸೆಕ್ ನೀರು ಒಳಹರಿವಿದೆ. ಬಂದನೀರು ಯಥಾವತ್ತಾಗಿ ನದಿಗೆ ಹರಿಸಲಾಗುತ್ತಿದೆ.