ಜಿಲ್ಲೆ

ಜೀವದ ಹಂಗು ತೊರೆದು ಜನ ಸೇವೆ

ರಾಯಚೂರು: ಜನರು ಸಂಕಷ್ಟದಲ್ಲಿರುವಾಗ ರೆಡ್‌ಕ್ರಾಸ್ ಸಂಸ್ಥೆ ಅವರ ಸೇವೆಗಾಗಿ ಕೆಲಸ ಮಾಡುತ್ತ ಬಂದಿದ್ದು, ಪ್ರವಾಹ, ಕೋವಿಡ್ ಸೇರಿದಂತೆ ಇತರ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕರ್ತರು ಜೀವದ ಹಂಗು ತೊರೆದು ಜನಸೇವೆ ಮಾಡಿದ್ದಾರೆ ಎಂದು ರೆಡ್‌ಕ್ರಾಸ್ ರಾಜ್ಯ ಶಾಖೆ ಸಭಾಪತಿ ಎಸ್.ವಿಜಯಕುಮಾರ ಪಾಟೀಲ್ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿವಿಯ ಬೆಳ್ಳಿ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಜಿಲ್ಲಾ ಘಟಕ ಉತ್ತಮ ಕಾರ್ಯಕ್ಕಾಗಿ ರಾಜ್ಯಪಾಲರಿಂದ ಪ್ರಶಸ್ತಿ ಪಡೆದುಕೊಂಡಿದೆ ಎಂದರು.

ಯುವ ಜನರು ಸೇವಾ ಮನೋಭಾವ ರೂಢಿಸಿಕೊಳ್ಳುವ ಮೂಲಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದೆ ಬರಬೇಕು. ಮುಂಬರುವ ದಿನಗಳಲ್ಲಿ ಸಂಸ್ಥೆಯಿಂದ ಐಎಎಸ್ ಮತ್ತು ಐಪಿಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ.ನೇಮಿಚಂದ್ರಪ್ಪ ಮಾತನಾಡಿ, ವಿವಿಯ ವಿದ್ಯಾರ್ಥಿಗಳು ರಕ್ತದ ಅವಶ್ಯಕತೆ ಇದ್ದಾಗ ರಕ್ತದಾನ ಮಾಡಲು ಸದಾ ಮುಂದೆ ಬರುತ್ತಿದ್ದು, ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ರಕ್ತದ ಅಗತ್ಯವಿದ್ದವರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಅಶೋಕ ಹೂಗಾರ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜಣ್ಣ, ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ಪದಾಧಿಕಾರಿಗಳಾದ ರಾವುತ್‌ರಾವ್, ಶ್ರೀನಿವಾಸ ರಾಯಚೂರಕರ್, ಶೇಖ್ ಮಹಿಬೂಬ್, ರಾಮಯ್ಯ ನಾಯಕ ಉಪಸ್ಥಿತರಿದ್ದರು.