ಜಿಲ್ಲೆ

ಸಾಥ್‌ಮೈಲ್ ಬಳಿ ರಸ್ತೆ ಸಂಚಾರ ತಡೆ; ಸಂಯುಕ್ತ ಹೋರಾಟ ಕರ್ನಾಟಕದಿಂದ ಪ್ರತಿಭಟನೆ

ಮಳೆಯಿಂದಾದ ಬೆಳೆನಷ್ಟಕ್ಕೆ ಪರಿಹಾರ ಒದಗಿಸಲು ಒತ್ತಾಯ

ರಾಯಚೂರು: ಮೂರುಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದರೂ ಸಂಸತ್ತಿನಲ್ಲಿ ಅಂಗೀಕರಿಸುವ ಮೂಲಕ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ನಗರ ಹೊರವಲಯದ ಸಾಥ್ ಮೈಲ್‌ನಲ್ಲಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಶುಕ್ರವಾರ ಸಂಚಾರ ತಡೆ ನಡೆಸಲಾಯಿತು.

ನಂತರ ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ್‌ಗೆ ಮನವಿ ಸಲ್ಲಿಸಲಾಯಿತು. ಕಾಯ್ದೆಗಳನ್ನು ರೈತರು ಹೋರಾಟ ಆರಂಭಿಸಿದ ಸಂದರ್ಭದಲ್ಲೇ ವಾಪಸ್ ಪಡೆದಿದ್ದರೆ 700 ರೈತರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ರಾಜ್ಯ ಸರ್ಕಾರವೂ ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿರುವುದರಿಂದ 80ಕ್ಕೂ ಹೆಚ್ಚು ಎಪಿಎಂಸಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ತೈಲ ಬೆಲೆ, ರಸಗೊಬ್ಬರ ಹಾಗೂ ಕೃಷಿ ಸಾಮಗ್ರಿಗಳ ಬೆಲೆ ಏರಿಕೆಯಿಂದ ರೈತರು ಮತ್ತು ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಅಕಾಲಿಕ ಮಳೆಯಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಮನವಿಯಲ್ಲಿ ಅಳಲು ತೋಡಿಕೊಳ್ಳಲಾಗಿದೆ.

ಬೆಳೆ ಹಾನಿಗೊಳಗಾದ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು. ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಲ್ಲಿನ ಅಕ್ರಮ ಪೈಪ್‌ಗಳನ್ನು ತೆರವುಗೊಳಿಸಬೇಕು. ಬೇಸಿಗೆ ಬೆಳೆಗೆ ಏಪ್ರಿಲ್ ಕೊನೆ ವಾರದವರೆಗೆ ಕಾಲುವೆಗೆ ನೀರು ಹರಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರೂಪಿಸಿ ಎಲ್ಲ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ತೀರ್ಮಾನ ಕೈಗೊಳ್ಳಬೇಕು. ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಚಾರ ತಡೆಯಿಂದಾಗಿ ವಾಹನ ಸವಾರರು ಸಂಕಷ್ಟ ಎದುರಿಸುವಂತಾಯಿತು. ಪ್ರತಿಭಟನೆ ಸಂದರ್ಭದಲ್ಲಿ ಸಿಕ್ಕುಬಿದ್ದ ಆಂಬುಲೆನ್ಸ್ ಆಸ್ಪತ್ರೆ ತೆರಳಲು ಸಮಸ್ಯೆ ಎದುರಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ದಾರಿ ಮಾಡಿಕೊಟ್ಟರು. ಸಂಘಟನೆಯ ಸಂಚಾಲಕ ಚಾಮರಸ ಮಾಲಿಪಾಟೀಲ್, ಪದಾಧಿಕಾರಿಗಳಾದ ಕೆ.ಜಿ.ವೀರೇಶ, ಸೂಗೂರಯ್ಯಸ್ವಾಮಿ, ಅಮರಣ್ಣ ಗುಡಿಹಾಳ, ಮಾರೆಪ್ಪ ಹರವಿ, ಎನ್.ಎಸ್.ವೀರೇಶ, ಡಿ.ಎಸ್.ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಆಂಜನೇಯ, ಬಿ.ಬಸವಲಿಂಗಪ್ಪ, ರಮೇಶ ವೀರಾಪುರ, ಇ.ರಂಗನಾಥ ಪಾಲ್ಗೊಂಡಿದ್ದರು.