ಜಿಲ್ಲೆ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಸಾಧ್ಯ

Gangavati - Desk - Veeresh S Ullagaddi

ರಾಯಚೂರು: ಸಂಗೀತ ಆಲಿಸುವುದರಿಂದ ಮಾನಸಿಕ ಉದ್ವೇಗ ಶಮನಗೊಂಡು ಮನಸ್ಸು ಶಾಂತವಾಗಿರಲು ಸಹಾಯ ಮಾಡುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಹೇಳಿದರು.

ನಗರದ ದೇವರು ಕಾಲನಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಗಿರಿಜನ ಉಪಯೋಜನೆಯಡಿ ಗುರುಶಿಷ್ಯ ಪರಂಪರೆ ಮಂಗಳವಾರ ಏರ್ಪಡಿಸಿದ್ದ ಸಂಗಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಾಚೀನ ಕಾಲದಲ್ಲಿ ಗುರುವನ್ನು ಅರಸಿಕೊಂಡು ಹೋಗಿ ಕಲಾಭ್ಯಾಸ ಮಾಡುವಂತಿತ್ತು. ಆದರೆ ಕಾಲ ಬದಲಾದಂತೆ ಶಿಷ್ಯರಲ್ಲಿಗೆ ಗುರು ಬರುವಂತಾಗಿದೆ. ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಗುರುಗಳನ್ನು ನೇಮಿಸಿ ಕಲಾಸಕ್ತರಿಗೆ ಕಲಿಕಾ ಶಿಬಿರ ಏರ್ಪಡಿಸುವ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಅಡಗಿರುತ್ತದೆ. ಅದನ್ನು ಗುರುತಿಸಿ ಬೆಳಕಿಗೆ ತರುವ ಸಾಮರ್ಥ್ಯ ಕೆಲವರಲ್ಲಿ ಮಾತ್ರ ಇರುತ್ತದೆ ಎಂದರು.ವಾರ್ಡನ್ ಮಂಜುಳಾ ಅವಧೂತ್, ಸಂಗೀತ ಗುರು ಮಹಾಲಕ್ಷ್ಮೀ, ಕಲಾವಿದರಾದ ಸುಧಾಕರ ಅಸ್ಕಿಹಾಳ, ಸಿದ್ದಪ್ಪ ಬ್ಯಾಳಿಕುಳಿ ಹಾಗೂ ವಿದ್ಯಾರ್ಥಿನಿಯರು ಇತರರಿದ್ದರು.