ಜಿಲ್ಲೆ

ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗವಂತ ನೌಕರರ ಸಮಾಜ, ರುದ್ರಸೇನೆ ಆಗ್ರಹ

ರಾಯಚೂರು: ಬೆಳಗಾವಿ ಜಿಲ್ಲೆಯ ಹಲಸಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದು ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗವಂತ ನೌಕರರ ಸಮಾಜ, ರುದ್ರಸೇನೆ ಬುಧವಾರ ಪ್ರತಿಭಟನೆ ನಡೆಸಿತು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಧಾರ್ಮಿಕ ಗುರುಗಳು, ದಾರ್ಶನಿಕರು ಮತ್ತು ಮಹಾನ್ ವ್ಯಕ್ತಿಗಳ ಪ್ರತಿಮೆ ಹಾಗೂ ಭಾವಚಿತ್ರಗಳಿಗೆ ಅಪಮಾನ ಮಾಡುತ್ತಿರುವ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಪ್ರತಿಮೆಗಳಿಗೆ ಭದ್ರತೆ ಒದಗಿಸಬೇಕು. ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮುಖಂಡರಾದ ಶರಣಬಸವ ಬಲ್ಲಟಗಿ, ಕೆ.ವೀರಭದ್ರಪ್ಪ, ಜೆ.ಬಸವರಾಜ, ಚನ್ನಬಸವಣ್ಣ ಮಹಾಜನಶೆಟ್ಟಿ, ಬಸವರಾಜ ಪಾಟೀಲ್ ಅತ್ತನೂರು, ಪ್ರಭು ಶಾಸ್ತ್ರಿ, ವೀರಯ್ಯಸ್ವಾಮಿ ಆಶಾಪುರ, ವಿಜಯಕುಮಾರ ಸಜ್ಜನ್ ಇದ್ದರು.