ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಡಾ.ಹರೀಶ್ ರಾಮಸ್ವಾಮಿ. 
ಜಿಲ್ಲೆ

ರಾಯಚೂರು ವಿಶ್ವವಿದ್ಯಾಲಯಕ್ಕೆ 600 ಕೋಟಿ ರೂ.ನೀಡಲು ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದ ಕುಲಪತಿ ಡಾ.ಹರೀಶ್ ರಾಮಸ್ವಾಮಿ

ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿ, ಶಿಕ್ಷಕೇತರ ಸಿಬ್ಬಂದಿ ವೇತನ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ಬಜೆಟ್‌ನಲ್ಲಿ 600 ಕೋಟಿ ರೂ. ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕುಲಪತಿ ಡಾ.ಹರೀಶ್ ರಾಮಸ್ವಾಮಿ ತಿಳಿಸಿದರು.

ವಿವಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಸರ್ಕಾರ ಬಜೆಟ್‌ನಲ್ಲಿ ಕನಿಷ್ಠ 100 ಕೋಟಿ ರೂ. ನೀಡುವ ನಿರೀಕ್ಷೆಯಿದ್ದು, ಯುಜಿಸಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದಲೂ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಕಾಲೇಜುಗಳ ಸಂಲಗ್ನತೆ ಮತ್ತು ಆಸ್ತಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಗುಲ್ಬರ್ಗ ವಿವಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಲ್ಲಿಂದ ಈಗಾಗಲೇ 20 ಕೋಟಿ ರೂ. ವಿವಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇನ್ನುಳಿದ 24 ಲಕ್ಷ ರೂ. ಬರಬೇಕಾಗಿದೆ ಎಂದರು.

ಮೊದಲ ಹಂತದ ಕಟ್ಟಡ ಕಾಮಗಾರಿಗೆ 150 ಕೋಟಿ ರೂ., ಶಿಕ್ಷಕೇತರ ಸಿಬ್ಬಂದಿ ವೇತನಕ್ಕಾಗಿ 76 ಕೋಟಿ ರೂ. ಎಸ್‌ಸಿಪಿ, ಟಿಎಸ್‌ಪಿ ಮತ್ತು ವಿವಿ ಅಭಿವೃದ್ಧಿ ಅನುದಾನಡಿ ಸುಮಾರು 205 ಕೋಟಿ ರೂ., ಬೋಧಕ ಸಿಬ್ಬಂದಿ ವೇತನಕ್ಕಾಗಿ 61 ಕೋಟಿ ರೂ. ಪ್ರಸ್ತಾವನೆ ಸಿದ್ಧಪಡಿಸಿ ಉನ್ನತ ಶಿಕ್ಷಣ ಇಲಾಖೆ ಸಲ್ಲಿಸಲಾಗಿದೆ. ಪ್ರಸ್ತುತ 17 ಕೋರ್ಸ್ ನಡೆಯುತ್ತಿದ್ದು, ಅದನ್ನು 28ಕ್ಕೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಪಾವಧಿ ಕೋರ್ಸ್ ಮತ್ತು ಸರ್ಟಿಫಿಕೇಟ್ ಕೋಸ್ ಆರಂಭಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಬಯೋ ಮೆಡಿಕಲ್ ಸಂಶೋಧನಾ ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 57 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ತಜ್ಞರ ಜತೆ ಸಮಾಲೋಚನೆ ನಡೆಸಲಾಗಿದೆ. ವಿವಿ ಆವರಣದಲ್ಲಿ ಪ್ರಮುಖವಾಗಿ ನೀರಿನ ಸಮಸ್ಯೆಯಿದ್ದು, ಒಂದು ಕೊಳವೆಬಾವಿಯಿಂದ ಮಾತ್ರ ಲಭ್ಯವಿದೆ. ಈ ನಿಟ್ಟಿನಲ್ಲಿ ವಿವಿ ಪಕ್ಕದಲ್ಲಿರುವ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಆವರಣದಲ್ಲಿರುವ ಕೆರೆಗೆ ನೀರು ಹರಿಸಲು ಕ್ರಮಕೈಗೊಳ್ಳುವಂತೆ ಜಲಸಂಪನ್ಮೂಲ ಇಲಾಖೆ ಹಾಗೂ ಜಿ.ಪಂ.ಗೆ ಪತ್ರ ಬರೆಯಲಾಗಿದೆ ಎಂದರು.

ವಿವಿ ಲಾಂಛನ ಸಿದ್ಧಪಡಿಸುವ ಕುರಿತು ಎಲ್ಲ ಕ್ಷೇತ್ರದ ಪ್ರಮುಖ ಅಭಿಪ್ರಾಯ ಪಡೆಯಲಾಗಿದೆ. ವಿಶಿಷ್ಟ ರೀತಿಯಲ್ಲಿ ಲಾಂಛನ ಸಿದ್ದಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ವಿವಿ ಅಭಿವೃದ್ಧಿಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ವಿವಿಧ ಕ್ಷೇತ್ರದ ಗಣ್ಯರನ್ನು ಭೇಟಿಯಾಗಿ ಸಹಕಾರ ನೀಡುವಂತೆ ಕೋರಲಾಗಿದೆ ಎಂದು ಡಾ.ಹರೀಶ್ ರಾಮಸ್ವಾಮಿ ತಿಳಿಸಿದರು. ಈ ಸಂದರ್ಭದಲ್ಲಿ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ವಿಶ್ವನಾಥ, ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ.ಪಾರ್ವತಿ ಹಾಗೂ ಇತರರಿದ್ದರು.