ರಾಯಚೂರು: ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ರೂಪಿಸುವಾಗ ಹಿಂದಿನ ಪ್ರಬಂಧಗಳನ್ನು ನಕಲು ಮಾಡುವುದು ಹಾಗೂ ಅಂತರ್ಜಾಲದಲ್ಲಿನ ವಿಷಯಗಳನ್ನು ಯಥಾವತ್ ಇಳಿಸುವ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಜ್ಞಾನಾರ್ಜನೆಯಾಗದಂತಾಗಿದೆ ಎಂದು ಧಾರವಾಡ ಕೃಷಿ ವಿವಿ ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿ.ಆರ್.ಕಿರೆಸೂರ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ ರಾಷ್ಟ್ರೀಯ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಸಂಶೋಧನೆಯಲ್ಲಿ ಗುಣಮಟ್ಟವಿದ್ದಾಗ ಮಾತ್ರ ಮುಂಬರುವ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಅವಕಾಶಗಳಿವೆ. ಅದನ್ನು ಬಳಸಿಕೊಳ್ಳುವ ಮೂಲಕ ಸಂಶೋಧನಾ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಆಲೋಚಿಸಿ ಪ್ರಬಂಧವನ್ನು ಮಂಡಿಸಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮರ್ಥ್ಯ ಅರಿತುಕೊಂಡು ಕೆಲಸ ಮಾಡಬೇಕು. ಜಡತ್ವವನ್ನು ಬಿಟ್ಟು ಕೆಲಸ ಮಾಡಿದಾಗ ಉತ್ತಮ ಫಲಿತಾಂಶ ಬರಲಿದೆ ಎಂದು ಹೇಳಿದರು.
ಸಮಸ್ಯೆಗಳ ಬಗ್ಗೆ ಚಿಂತನೆ ಮಾಡದೆ ಪರಿಹಾರಗಳ ಬಗ್ಗೆ ಚಿಂತನೆ ಮಾಡಬೇಕು. ಹೆಚ್ಚಿನ ಸವಾಲುಗಳಿದ್ದಾಗ ಮಾತ್ರ ನಮ್ಮ ಜ್ಞಾನ, ಪರಿಶ್ರಮಕ್ಕೆ ಬೆಲೆ ಬರುತ್ತದೆ. ರಾಜಿ ಮಾಡಿಕೊಳ್ಳುವ ಸ್ವಭಾವವನ್ನು ವಿದ್ಯಾರ್ಥಿಗಳು ಕೈಬಿಡಬೇಕು ಎಂದು ಸಲಹೆ ನೀಡಿದರು.
ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಕೊಟ್ರೇಶಪ್ಪ ಕೋರಿ ಮಾತನಾಡಿ, ವಿದ್ಯಾರ್ಥಿಗಳ ಸಂಶೋಧನೆಗಳು ರೈತರಿಗೆ ಉಪಯೋಗವಾಗುವಂತಿರಬೇಕು. ವಿದ್ಯಾರ್ಥಿಗಳು ರೈತರ ಜಮೀನುಗಳಿಗೆ ತೆರಳಿ ಅಲ್ಲಿನ ಸಮಸ್ಯೆ, ಅಗತ್ಯತೆಗಳನ್ನು ಅರಿತುಕೊಂಡು ಸಂಶೋಧನೆಯಲ್ಲಿ ತೊಡಬೇಕು ಎಂದರು.
ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ವಿವಿ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ್, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ಕುಲಸಚಿವ ಡಾ.ಎಂ.ವೀರನಗೌಡ, ಸ್ನಾತಕೋತ್ತರ ವಿಭಾಗದ ಡೀನ್ ಡಾ.ಗುರುರಾಜ ಸುಂಕದ್, ವಿಶ್ರಾಂತ ಕುಲಪತಿಗಳಾದ ಡಾ.ಎಸ್.ಕೆ.ಮೇಟಿ, ಡಾ.ಎಂ.ಕೆ.ನಾಯಕ, ವ್ಯವಸ್ಥಾಪನಾ ಮಂಡಳಿ ಸದಸ್ಯ ಸುನೀಲ ಕುಮಾರ ವರ್ಮಾ ಇದ್ದರು.
ಸಂಶೋಧನಾ ಸಮ್ಮೇಳನ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ. ಆಳವಾದ ಜ್ಞಾನ ಮತ್ತು ಗ್ರಹಿಕೆಯೊಂದಿಗೆ ಸಂಶೋಧನೆಯಲ್ಲಿ ತೊಡಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕು.| ಡಾ.ಕೆ.ಎನ್.ಕಟ್ಟಿಮನಿ ವಿವಿ ಕುಲಪತಿ
ಬಹತೇಕ ಕುರ್ಚಿಗಳು ಖಾಲಿ…
ನಗರದ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸ್ನಾತಕೋತ್ತರ ಸಂಶೋಧನಾ ಸಮಾವೇಶ ಹೆಸರಿಗೆ ಮಾತ್ರ ರಾಷ್ಟ್ರೀಯ ಸಮಾವೇಶವಾಗಿತ್ತು. ರಾಜ್ಯದ ಕೆಲವು ವಿವಿಗಳ ಸಂಶೋಧನಾ ವಿದ್ಯಾರ್ಥಿಗಳು ಮಾತ್ರ ಪಾಲ್ಗೊಂಡಿದ್ದು, ಪ್ರೇಕ್ಷಾಗೃಹದಲ್ಲಿನ ಕುರ್ಚಿಗಳು ಬಹುತೇಕ ಖಾಲಿ ಇದ್ದವು. ಸಂಶೋಧನಾ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆ ಇರುವುದು ಎದ್ದು ಕಾಣುತ್ತಿತ್ತು.
ಸಮಾವೇಶ ಉದ್ಘಾಟಿಸಿದ ಡಾ.ವಿ.ಆರ್.ಕಿರೆಸೂರ ಕೂಡ ಅದನ್ನು ಪರೋಕ್ಷವಾಗಿ ತಮ್ಮ ಭಾಷಣದಲ್ಲಿಯೂ ಪ್ರಸ್ತಾಪಿಸಿ, ಧಾರವಾಡ ವಿವಿಯಲ್ಲಿಯೂ ಸಂಶೋಧನಾ ಸಮಾವೇಶ ಏರ್ಪಡಿಸಲಾಗುತ್ತಿದ್ದು, ರಾಯಚೂರು ವಿವಿಯಲ್ಲಿ ರಾಷ್ಟ್ರೀಯ ಸಮಾವೇಶ ಎನ್ನುವ ಕಾರಣಕ್ಕೆ ಇದರಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಸಂದರ್ಶನದಲ್ಲಿ ಎರಡು ಅಂಕ ಹೆಚ್ಚಿಗೆ ಸಿಗುತ್ತವೆ ಎಂದರು.