ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ ಗೇಜ್ ವ್ಯತ್ಯಾಸವನ್ನು ಸರಿಪಡಿಸಿದ ಇಂಜಿನಿಯರ್ ವಿರುದ್ಧ ಕ್ರಮಕ್ಕಾಗಿ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆಗಳನ್ನು ನಿಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಟಿಎಲ್‌ಬಿಸಿ ಕಾಲುವೆಯ ಎಲ್ಲಾ ಗೇಜ್‌ಗಳನ್ನು ಸರಿಪಡಿಸುವಂತೆ ಮೊದಲಿನಿಂದಲೂ ಹೋರಾಟಗಳು ನಡೆಯುತ್ತಿದ್ದು, ಇದೀಗ ಮೈಸೂರಿನ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ(ಕೆಇಆರ್‌ಸಿ)ದ ಶೀಾರಸ್ಸಿನ ಮೇರೆಗೆ ಗೇಜ್‌ಸರಿಪಡಿಸಲಾಗಿದೆ. ಕಾಲುವೆಯ 69 ಮೈಲ್‌ನ ಗೇಜ್ ಸರಿಪಡಿಸಲಾಗಿದ್ದು, ಹಳೆಯ ಮತ್ತು ಹೊಸ ಗೇಜ್‌ಗಳ ಮಧ್ಯೆ ಒಂದು ಅಡಿ, ಒಂದು ಇಂಚು ನೀರಿನ ವ್ಯತ್ಯಾಸ ಬಂದಿದೆ ಎಂದು ತಿಳಿಸಿದರು.
ಗೇಜ್ ವ್ಯತ್ಯಾಸ ಸರಿಪಡಿಸಿದ ಇಂಜಿನಿಯರ್ ವಿರುದ್ಧ ಶಾಸಕ ಬಾದರ್ಲಿ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಒತ್ತಾಯಿಸುತ್ತಿರುವುದು ಸರಿಯಾದ ಕ್ರಮವಲ್ಲ. ವ್ಯತ್ಯಾಸದ ನೀರನ್ನು ಮೇಲ್ಬಾಗದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. 2 ಲಕ್ಷ ಎಕರೆಯಷ್ಟು ಜಮೀನುಗಳಿಗೆ ಅನಧೀಕೃತವಾಗಿ ನೀರು ಹರಿಸಿಕೊಳ್ಳಲಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯ ನೀರು ಕಾಲುವೆ ವ್ಯಾಪ್ತಿಯ ಎಲ್ಲ ರೈತರಿಗೆ ಸಿಗಬೇಕು ಕೇವಲ ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಗೆ ಸೀಮಿತವಾಗಿಸಿಕೊಂಡು ಕೆಳಭಾಗದ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ನೀರು ನಿರ್ವಹಣೆಗೆ ಇಲಾಖೆ ಕಾಳಜಿ ವಹಿಸಲಿ
ಇದೇ ರೀತಿ ಹಲವು ಮೈಲ್‌ಗಳ ಗೇಜ್‌ಗಳಲ್ಲಿ ವ್ಯತ್ಯಾಸವಿದ್ದು, ಕೂಡಲೇ ಎಲ್ಲಾ ಗೇಜ್‌ಗಳನ್ನು ಸರಿಪಡಿಸಲು ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗಬೇಕು ಅನಧೀಕೃತವಾಗಿ ನೀರಾವರಿ ಮಾಡುತ್ತಿರುವುದನ್ನು ತಡೆಗಟ್ಟಬೇಕು. ರೈತರ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಕೂಡಲೇ ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಬೇಕು ಎಂದು ಒತ್ತಾಯಿಸಿದರು.