ಜಿಲ್ಲೆ

ಅಭಿಯಾನಕ್ಕೆ ಸೀಮಿತವಾಗುವುದೇ ಗ್ರಾ.ಪಂ ತೆರಿಗೆ ಸಂಗ್ರಹ?

ಸುಂಕ ಕೂಡಿಕೆ ಕಡಿಮೆಯಾದರೆ ಅಭಿವೃದ್ಧಿಗೆ ಮಾರಕ

ರಾಯಚೂರು: ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಒಂದೇ ದಿನಕ್ಕೆ ಅತಿ ಹೆಚ್ಚು ಕರವಸೂಲಿಯಾಗಿದೆ. ಅಭಿಯಾನದ ಭಾಗವಾಗಿ ಗುರುವಾರ ನಡೆಸಿದ ತೆರಿಗೆ ಸಂಗ್ರಹ ಕಾರ್ಯಚರಣೆಯಲ್ಲಿ ಹೆಚ್ಚು ಸುಂಕ ಸಂಗ್ರಹವಾಗಿದ್ದು, ಅಭಿಯಾನಕ್ಕೆ ಮಾತ್ರ ತೆರಿಗೆ ವಸೂಲಿ ಕಾರ್ಯಚರಣೆ ಸೀಮಿತವಾಗದೇ ನಿರಂತರವಾಗಿಯೂ ಈ ಕಾರ್ಯ ಆಗಬೇಕಿದೆ.

ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ತೆರಿಗೆ ಸಂಗ್ರಹ ಅತ್ಯಂತ ಮಹತ್ತರವಾದ ಪಾತ್ರ ವಹಿಸುತ್ತದೆ. ಕರ ವಸೂಲಿ ಪ್ರಗತಿಯಲ್ಲಿ ಕಡಿಮೆ ಸಾಧನೆಯಾಗುವುದು ಗ್ರಾಮೀಣ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಮಾರಕವಾಗಿಯೂ ಪರಿಣಮಿಸುತ್ತದೆ.

ಮುಖ್ಯವಾಗಿ ಗ್ರಾಮೀಣ ಭಾಗದ ಜನರಲ್ಲಿ ತೆರಿಗೆ ಸಂಸ್ಕೃತಿ ಅರಿವು ಕಡಿಮೆಯಿರುತ್ತದೆ. ಜತೆಗೆ ಎಷ್ಟು ಹಣ ಕೊಟ್ಟರೇನು ಅಭಿವೃದ್ಧಿ ಕಾಣಸಿಗುವುದೇ? ಎಂಬ ಪ್ರಶ್ನೆಗಳು ಗ್ರಾಮಸ್ಥರಲ್ಲಿ ಸರ್ವೇಸಾಮಾನ್ಯವಾಗಿ ಕೇಳಿಬರುತ್ತಿವೆ. ತೆರಿಗೆ ವಸೂಲಿ ಮಾಡಬೇಕಾದ ಅಧಿಕಾರಿಗಳು ಕೂಡ ಈ ಬಗ್ಗೆ ಗಮನ ಹರಿಸದೇ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಾಗಿ, ಅಭಿಯಾನ ನಡೆಸಿದಾಗ ಮಾತ್ರ ವಸೂಲಿಗೆ ಮುಂದಾಗುತ್ತಾರೆ. ಆದರೆ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಬಗೆಹರೆಸಲು ಮುಂದಾಗುವ ಜತೆಗೆ ತೆರಿಗೆ ಪಾವತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.

ಶುಕ್ರವಾರ ಬಿಡುಗಡೆಯಾದ ತೆರಿಗೆ ಸಂಗ್ರಹ ಅಭಿಯಾನದ ದತ್ತಾಂಶದಲ್ಲಿ ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ ಅತಿ ಹೆಚ್ಚು ತೆರಗೆ ಸಂಗ್ರಹವಾಗಿದ್ದು, 64.11 ಲಕ್ಷ ರೂ.ಕರ ವಸೂಲಾಗಿದೆ. 7.48 ಲಕ್ಷ ರೂ. ತೆರಿಗೆ ಸಂಗ್ರಹವಾಗುವ ಮೂಲಕ ದೇವದುರ್ಗದಲ್ಲಿ ಅತಿ ಕಡಿಮೆ ಪ್ರಗತಿ ಆಗಿದೆ.

ಈ ಬಾರಿ ಒಟ್ಟು 16 ಕೋಟಿಗೂ ಹೆಚ್ಚಿನ ತೆರಿಗೆ ಬೇಡಿಕೆ ಜಿಲ್ಲೆಗಿದ್ದು, ಅಭಿಯಾನದ ಸಂದರ್ಭದಲ್ಲಿ ತೆರಿಗೆ ವಸೂಲಿ ಮಾಡಿದಂತೆ ನಿರಂತರವಾಗಿ ತೆರಿಗೆ ಸಂಗ್ರಹ ಮಾಡಿ, ಶೇ.100 ರಷ್ಟು ಪ್ರಗತಿಯನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಕರವಸೂಲಿಗಾರರು ಸಾಧಿಸಿದ್ದಲ್ಲಿ ರಾಜ್ಯದಲ್ಲಿಯೇ ತೆರಿಗೆ ಸಂಗ್ರಹದಲ್ಲಿ ನಂ.1 ಸ್ಥಾನಕ್ಕೆ ರಾಯಚೂರು ಜಿಲ್ಲೆಯ ತಲುಪಬಹುದಾಗಿದೆ.

ರಾಯಚೂರು ಜಿಲ್ಲೆಯ 179 ಗ್ರಾಮ ಪಂಚಾಯತಿಗಳಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 9.92 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಒಟ್ಟು 14.81 ಕೋಟಿಯಷ್ಟು ವರ್ಷದ ಬೇಡಿಕೆ ಕಳೆದ ಸಾಲಿನಲ್ಲಿ ಇಡಲಾಗಿತ್ತು. ಶೇ.67 ರಷ್ಟು ಪ್ರಗತಿಯನ್ನು ಕಳೆದ ಬಾರಿ ಸಾಧಿಸಲಾಗಿದೆ.

ಈ ಬಾರಿ ಸರಿಸುಮಾರು 16 ಕೋಟಿಯಷ್ಟು ವರ್ಷದ ಬೇಡಿಕೆಯಿದ್ದು, ಅಭಿಯಾನದಲ್ಲಿ 1.79 ಕೋಟಿಯನ್ನು ವಸೂಲಿ ಮಾಡಲಾಗಿದ್ದು, ಅಭಿಯಾನದ ರೀತಿಯಲ್ಲಿ ತಿಂಗಳಲ್ಲಿ ಎರಡು ಬಾರಿ ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳು ಹಾಗೂ ಕರವಸೂಲಿಗಾರರು ಮುಂದಾದಲ್ಲಿ ಹತ್ತು ತಿಂಗಳಲ್ಲಿಯೇ ಪೂರ್ಣಪ್ರಮಾಣದಲ್ಲಿ ಕರ ಸಂಗ್ರಹದಲ್ಲಿ ಪ್ರಗತಿಯನ್ನು ಸಾಧಿಸಬಹುದಾಗಿದೆ.

ನೂರಾರು ಸಮಸ್ಯೆಗಳ ನಡುವೆ ಕರ ವಸೂಲಿ

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ. ಜನರು ಗ್ರಾ.ಪಂಗೆ ಇಡಿ ಶಾಪ ಹಾಕುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಮೊದಲು ಮೂಲಭೂತ ಸೌಕರ್ಯಗಳನ್ನು ನೀಡಿ ನಂತರ ತೆರಿಗೆ ಕಟ್ಟುತ್ತೇವೆ ಎಂಬ ಮಾತುಗಳು ಹಲವು ಗ್ರಾಮಗಳ ಜನರಿಂದ ಕೇಳಿ ಬರುತ್ತಿವೆ. ಅಭಿವೃದ್ಧಿ ಕಾಣದೇ ತೆರಿಗೆ ಪಾವತಿ ಮಾಡುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದು, ಗ್ರಾಮಗಳಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಬೇಕಾಗಿದ್ದು, ಆಗ ಜನರು ತಾವಾಗಿಯೇ ತೆರಿಗೆ ಕಟ್ಟಲು ಗ್ರಾ.ಪಂಗೆ ಬರುತ್ತಾರೆ.

ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವ ಹಿನ್ನೆಲೆಯಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ತೆರಿಗೆ ಸಂಗ್ರಹ ಕಾರ್ಯ ಮುಂದುವರೆಯಲಿದೆ. ಜತೆಗೆ ತೆರಿಗೆ ಪಾವತಿ ಕುರಿತು ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗುವುದು. | ರಾಹುಲ್ ತುಕಾರಾಂ ಪಾಂಡ್ವೆ, ಸಿಇಒ, ಜಿ.ಪಂ ರಾಯಚೂರು ಮೊದಲು ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪಂಚಾಯತಿಗಳು ಮುಂದಾಗಬೇಕು. ಸಮಸ್ಯೆಗಳನ್ನು ಎದುರಿಸುತ್ತಾ ತೆರಿಗೆ ಕಟ್ಟಲು ಕಷ್ಟವಾಗುತ್ತದೆ. ಮೂಲಭೂತ ಸೌಲಭ್ಯ ಕೊರತೆಯಾಗದಂತೆ ನೋಡಿಕೊಂಡರೇ ನಾವೇ ತೆರಿಗೆ ಕಟ್ಟಲು ಬರುತ್ತೇವೆ.   | ಮಲ್ಲಿಕಾರ್ಜುನ, ಗ್ರಾಮಸ್ಥ, ತುಂಟಾಪುರ