ರಾಯಚೂರು: ಈಗಾಗಲೇ ಅತಿವೃಷ್ಟಿಯಿಂದ ನಲುಗಿರುವ ರೈತ, ಮುಂಗಾರಿನಲ್ಲಿ ಬೆಳೆದ ಹತ್ತಿ ಖರೀದಿಗೆ ಸರ್ಕಾರದಿಂದ ಕೇಂದ್ರಗಳನ್ನು ಸ್ಥಾಪನೆ ಮಾಡಲು ತಿಂಗಳ ಹಿಂದೆ ಅಧಿಸೂಚನೆ ಹೊರಡಿಸಲಾಗಿದ್ದರೂ ಜಿಲ್ಲೆಯಲ್ಲಿ ಕೇಂದ್ರಗಳ ಸ್ಥಾಪನೆಗೆ ಅಧಿಕಾರಿಗಳು ಈಗ ಎಚ್ಚೆತ್ತುಕೊಂಡಿದ್ದಾರೆ.
ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ 9, ದೇವದುರ್ಗ ತಾಲೂಕಿನಲ್ಲಿ 4 ಹಾಗೂ ಮಾನ್ವಿ ತಾಲೂಕಿನಲ್ಲಿ ಒಂದು ಕೇಂದ್ರ ಸೇರಿ 14 ಹತ್ತಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಅ.5ರಂದು ಅಧಿಸೂಚನೆ ಹೊರಡಿಸಿದ್ದು, ಇತ್ತೀಚೆಗೆ ಖರೀದಿ ಕೇಂದ್ರ ಸ್ಥಾಪನೆಗೆ ಅಧಿಕಾರಿಗಳು ಮುಂದಾಗುತ್ತಿರುವುದು ನಿಧ್ರೆಯಲ್ಲಿದ್ದ ಅಧಿಕಾರಿಗಳಿಗೆ ಇದೀಗ ಎಚ್ಚರವಾಗಿದ್ದು, ಅಧಿಕಾರಿಗಳ ಸೋಮಾರಿತನ ಗಡ್ಡಕ್ಕೆ ಬೆಂಕಿ ಹತ್ತಿಕೊಂಡ ನಂತರ ಬಾವಿ ತೋಡಿದಂತಾಗಿದೆ.
ಹುಬ್ಬಳಿಯ ಭಾರತೀಯ ಹತ್ತಿ ನಿಗಮ(ಸಿಸಿಐ)ದಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹತ್ತಿ ಉತ್ಪನ್ನವನ್ನು ಖರೀದಿಸಲು ಕೃಷಿ ಮಾರಾಟ ಇಲಾಖೆಗೆ ಕೋರಲಾಗಿತ್ತು. ಅದರಂತೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಹತ್ತಿ ಉತ್ಪನ್ನವನ್ನು ಬೆಂಬಲಬೆಲೆ ಯೋಜನೆಯಡಿ ಖರೀದಿಸಲು ಜಿಲ್ಲೆಯಲ್ಲಿ ಹದಿನಾಲ್ಕು ಖರೀದಿ ಕೇಂದ್ರಗಳನ್ನು ಗುರುತಿಸಿ ಖರೀದಿ ಆರಂಭಿಸಲು ಅಧಿಸೂಚನೆ ಹೊರಡಿಸಿದ್ದರು. ಆದೇಶವಾಗಿ ಒಂದು ತಿಂಗಳು ಸಮೀಪಿಸುತ್ತಿದ್ದರೂ ಖರೀದಿ ಕೇಂದ್ರ ಸ್ಥಾಪನೆಗೆ ಒಲವು ತೋರಿರದ ಅಧಿಕಾರಿಗಳು ಈಚೆಗೆ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತ ಹತ್ತಿ ಬೆಳೆಗಾರರು, ಖಾಸಗಿ ವರ್ತಕರು ಹೇಳಿದ ಬೆಲೆಗೆ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಬಹುತೇಕ ಹತ್ತಿ ಬೆಳೆದ ರೈತರು ಹತ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದು, ಮೊದಲೇ ಹೆಚ್ಚಿನ ಮಳೆ, ಕೀಟಬಾದೆಯಿಂದ ಕಂಗಾಲಾಗಿರುವ ರೈತರು ಅಧಿಕಾರಿಗಳ ಸೋಮಾರಿತನದಿಂದ ಬೆಂಬಲ ಬೆಲೆಯೂ ಇಲ್ಲದೇ ನಷ್ಟಕ್ಕೀಡಾಗಿದ್ದಾರೆ.
ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಹತ್ತಿ ಬಿತ್ತನೆ ಹೆಚ್ಚಾಗಿದ್ದು, ಕೃಷಿ ಇಲಾಖೆಗಿದ್ದ ಗುರಿಯನ್ನು ದಾಟಿ ಹೆಚ್ಚಿನ ಸಾಧನೆ ಈ ಬಾರಿಯಾಗಿದೆ. ಜಿಲ್ಲೆಯಲ್ಲಿ 1.53 ಲಕ್ಷ ಹೆಕ್ಟರ್ ಗುರಿಯನ್ನು ಹೊಂದಲಾಗಿತ್ತು. ಆದರೆ ಜಿಲ್ಲೆಯಲ್ಲಿ 1.76 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದ್ದು, ಶೇ.115.14ರಷ್ಟು ಸಾಧನೆ ಈ ಬಾರಿಯ ಹತ್ತಿ ಕ್ಷೇತ್ರದಲ್ಲಾಗಿದೆ. ಆದರೆ ಸರ್ಕಾರದಿಂದ ಸಿಗಬೇಕಾದ ಬೆಂಬಲ ಬೆಲೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರ ಕೈತಪ್ಪಿದಂತಾಗಿದೆ.
ಹತ್ತಿ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಯಡಿ ಉದ್ದ ಹತ್ತಿ ಉತ್ಪನ್ನಕ್ಕೆ 7521 ರೂ. ಹಾಗೂ ಮಧ್ಯ ಹತ್ತಿಗೆ 7121 ರೂ,ಗಳನ್ನು ನಿಗದಿಪಡಿಸಲಾಗಿದೆ. ಆದರೆ ಬೆಳೆದ ಹತ್ತಿಯನ್ನು ಖಾಸಗಿಯವರೆಲ್ಲ ಕೊಂಡ ನಂತರ ಅಧಿಕಾರಿಗಳು ಹೆಸರಿಗೆ ಮಾತ್ರ ಖರೀದಿ ಕೇಂದ್ರ ಸ್ಥಾಪಿಸಿದಂತಿದೆ.
ಹತ್ತಿಯ ತೇವಾಂಶದ ಪ್ರಮಾಣ ಶೇ.8 ರಿಂದ ಶೇ.12ರವರೆಗೆ ಇರಬೇಕು ಆದರೆ ಜಿಲ್ಲೆಯ ರೈತರ ಹತ್ತಿಯು ಶೇ.15ರಷ್ಟು ತೇವಾಂಶವಿದೆ. ಆದ್ದರಿಂದ ಖರೀದಿಗೆ ವಿಳಂಬವಾಗಿದೆ ಎಂದು ಸಿಸಿಐ ಅಧಿಕಾರಿಗಳು ಹೇಳುತ್ತಿದ್ದು, ಆದರೆ ಖರೀದಿ ಕೇಂದ್ರಗಳನ್ನಾದರೂ ಆರಂಭ ಮಾಡಿದ್ದರೆ ರೈತರು ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿತ್ತು ಎನ್ನುವುದು ರೈತರ ಬೇಸರದ ಮಾತುಗಳಾಗಿವೆ.
ಸರ್ಕಾರದ ಅಧಿಸೂಚನೆಗೂ ಬೆಲೆ ಕೊಡದ ಅಧಿಕಾರಿಗಳ ವಿರುದ್ಧ ಇದೀಗ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರೈತರ ಸದುಪಯೋಗಕ್ಕಾಗಿ ಜಾರಿಗೆ ತರಲಾದ ಸರ್ಕಾರದ ಯೋಜನೆಗಳು ಅಧಿಕಾರಿಗಳ ನಿರ್ಲಕ್ಷೃತನದಿಂದ ನೆನೆಗುದಿಗೆ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಿಂದ ಹತ್ತಿ ಖರೀದಿಯ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರೈತರಿಂದ ಬೆಂಬಲಬೆಲೆ ಯೋಜನೆಯಡಿ ಹತ್ತಿ ಖರೀದಿಸಲು ಪ್ರಸ್ತುತ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. | ಆದಪ್ಪ, ಕಾರ್ಯದರ್ಶಿ, ಎಪಿಎಂಸಿ ರಾಯಚೂರು ಹತ್ತಿ ಖರಿದಿ ಕೇಂದ್ರ ಸ್ಥಾಪನೆ ಮಾಡಲು ಅಧಿಕಾರಿಗಳ ನಿರ್ಲಕ್ಷೃ ಮತ್ತು ವಿಳಂಬ ಧೋರಣೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಹೋರಾಟಗಳಿಂದಲೇ ಹತ್ತಿ ಖರೀದಿ ಕೇಂದ್ರ ಸ್ಥಾಪನೆ ಮಾಡಿಸುವ ಪರಿಸ್ಥಿತಿ ಇದೆ. | ಮಲ್ಲನಗೌಡ, ಜಿಲ್ಲಾ ಕಾರ್ಯದರ್ಶಿ, ಎಐಕೆಕೆಎಂಎಸ್ ರಾಯಚೂರು.