ರಾಯಚೂರು: ಕಳೆದ 790 ದಿನಗಳಿಂದ ನಿರಂತರವಾಗಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಹೋರಾಟ ನಡೆಯುತ್ತಿದ್ದು, ಆದರೆ ಈ ಹೋರಾಟಕ್ಕೆ ಈವರೆಗೂ ಸರ್ಕಾರದಿಂದ ಪ್ರತಿಕ್ರಿಯೆ, ಪ್ರತಿಫಲ ಸಿಗದಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರನ್ನು ಕಡೆಗಣಿಸುತ್ತಿರುವುದನ್ನು ಎತ್ತಿ ತೋರಿಸುತ್ತಿದೆ.
2022ರಲ್ಲಿ ಆರಂಭವಾದ ಏಮ್ಸ್ ಹೋರಾಟ ನಿರಂತರವಾಗಿ ಮುಂದುವರೆದಿದೆ. ಮಂಗಳವಾರದಂದು ಈ ಹೋರಾಟ 789ನೇ ದಿನ ಪೂರೈಸಿತು. ಕಲ್ಯಾಣ ಕರ್ನಾಟಕ ಭಾಗದ ಇತಿಹಾಸದಲ್ಲಿ ಎಲ್ಲ ಜಿಲ್ಲೆಗಳು ಧ್ವನಿ ಎತ್ತಿ ಏಮ್ಸ್ ರಾಯಚೂರಿಗೆ ನೀಡಬೇಕು ಎನ್ನುತ್ತಿವೆ.
ಏಮ್ಸ್ ಹೋರಾಟ ಕೇವಲ ಏಮ್ಸ್ ಸ್ಥಾಪನೆಗೆ ಮಾತ್ರವಲ್ಲ. ಇದು ಜಿಲ್ಲೆಗೆ ಐಐಟಿ ವಿಷಯದಲ್ಲಿ ಆಗಿರುವ ಪರಮ ಅನ್ಯಾಯ. ಪ್ರಾದೇಶಿಕ ಅಸಮತೋಲನ ತೊಲಗಿಸುವ ಹೋರಾಟವಾಗಿದೆ. ಉತ್ತರ ಕರ್ನಾಟಕದ ಮೇಲೆ ರಾಜಕೀಯ ವ್ಯಕ್ತಿಗಳ ದಬ್ಬಾಳಿಕೆಯ ವಿರುದ್ಧದ ಹೋರಾಟವಾಗಿದೆ. ಕಲ್ಯಾಣ ಕರ್ನಾಟಕದ ಸ್ವಾಭಿಮಾನದ ಹೋರಾಟವಾಗಿ ಪರಿವರ್ತನೆಯಾಗುತ್ತದೆ ಎಂಬುದು ಹೋರಾಟಗಾರರ ಅಭಿಪ್ರಾಯವಾಗಿದೆ. ರಾಯಚೂರು ಜಿಲ್ಲೆಗೆ ಸೀಮಿತವಾಗಿದ್ದ ಹೋರಾಟ ಇದೀಗ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಬೇಡಿಕೆಯ ಹೋರಾಟವಾಗಿ ಮಾರ್ಪಟ್ಟಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ಮುಂಬೈ ಕರ್ನಾಟಕ ಭಾಗಕ್ಕೆ ತುಲನೆ ಮಾಡಿದರೆ 50 ವರ್ಷ ಹಿಂದೆ ಉಳಿದಿದೆ ಹೀಗಾದರೆ ಕರ್ನಾಟಕದ ಎಲ್ಲ ಭಾಗಗಳು ಸಮಾನವಾಗಿರಲು ಸಾಧ್ಯವಿಲ್ಲ ಎಂಬುದು ಇಲ್ಲಿನ ಜನರ ಅನಿಸಿಕೆಯಾಗಿದೆ.
ಇದೀಗ ಏಮ್ಸ್ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲವನ್ನು ಸೂಚಿಸುತ್ತಿದ್ದು, ಬಹುದೊಡ್ಡ ಹೋರಾಟವಾಗಿ ಮಾರ್ಪಡುತ್ತಿದೆ. ಮುಂದಿನ ದಿನಗಳಲ್ಲಿ ಏಮ್ಸ್ ಹೋರಾಟಕ್ಕೆ ಸಂಘಟನೆಗಳ ಬಲ ಹೆಚ್ಚಳವಾಗುತ್ತದೆಯೇ ಅಥವಾ ರಾಜಕೀಯ ಇಚ್ಛಾಶಕ್ತಿಯ ಕಾರ್ಯ ನಿರ್ವಹಿಸುವುದೇ ಎಂದು ಕಾದು ನೋಡಬೇಕಾಗಿದೆ.
ಕಲ್ಯಾಣ ಕರ್ನಾಟಕದ ಜನರು ಎಚ್ಚರಗೊಂಡಿದ್ದಾರೆ. ಸರ್ಕಾರಗಳು ಮಾಡಿದ ಅನ್ಯಾಯದ ಮನವರಿಕೆಯಾಗಿದೆ. ಈ ಭಾಗದ ಮೇಲಾಗುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ಜತೆಗೆ ಏಮ್ಸ್ ಬರುವವರೆಗೂ ಹೋರಾಟ ನಿಲ್ಲುವುದಿಲ್ಲ.| ಬಸವರಾಜ್ ಕಳಸ ಪ್ರಧಾನ ಸಂಚಾಲಕ, ಏಮ್ಸ್ ಹೋರಾಟ ಸಮಿತಿ