ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದರೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ | ತಾತ್ಕಾಲಿಕ ವ್ಯವಸ್ಥೆಗೆ ಅಸ್ತು
ವಿಜಯವಾಣಿ ವಿಶೇಷ
ರಾಯಚೂರು: ಜಿಲ್ಲೆಯಲ್ಲಿ ಪ್ರಾಥಮಿಕ-ಪ್ರೌಢ ಶಿಕ್ಷಣ ವರ್ಷದಿಂದ ವರ್ಷಕ್ಕೆ ತಳಕಚ್ಚುತ್ತಿದೆ. ಆದರೂ, ಶಿಕ್ಷಕರ ನೇಮಕಕ್ಕೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಪರಿಣಾಮ ಈ ಶೈಕ್ಷಣಿಕ ವರ್ಷವೂ ಮಕ್ಕಳಿಗೆ ಅತಿಥಿ ಶಿಕ್ಷಕರಿಂದಲೇ ಪಾಠ ಮಾಡಿಸುವ ಪದ್ಧತಿಗೆ ಸರ್ಕಾರ ಮೊರೆ ಹೋಗಿದೆ.
ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಕಳಪೆ ಸಾಧನೆಗೆ ಶಿಕ್ಷಣ ಪ್ರೇಮಿಗಳು ಹಾಗೂ ಪಾಲಕ ವರ್ಗ ಆತಂಕಕ್ಕೆ ಸಿಲುಕುವಂತೆ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ದೂರು ಕೇಳಿಬರುತ್ತಿದ್ದರೂ ಸರ್ಕಾರ ನಿಧಾನಗತಿ ನಿರ್ಧಾರಗಳಿಂದ ತಾತ್ಕಾಲಿಕ ಬೋಧನಾ ವ್ಯವಸ್ಥೆಗೆ ಮುಂದಾಗಿರುವುದು ಸಮಸ್ಯೆ ತೀವ್ರತೆ ಹೆಚ್ಚಳಕ್ಕೆ ದಾರಿ ಮಾಡಿದೆ. ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಹತ್ತಾರು ಸೌಲಭ್ಯಗಳ ಕೊರತೆಯಿರುವುದು ಹೊಸದಲ್ಲ. ಶೌಚಗೃಹಗಳಿದ್ದರೂ ನಿರ್ವಹಣೆ ಕೊರತೆ, ಕುಡಿವ ನೀರಿನ ಸಮಸ್ಯೆಯಂಥ ಮೂಲಸೌಲಭ್ಯಗಳ ಒದಗಿಸುವಿಕೆಯಲ್ಲಿ ಇರುವ ಕೊರತೆಗಳ ನಡುವೆ ಸರ್ಕಾರವು ಬೋಧಕರ ನೇಮಕಕ್ಕೆ ತೋರುತ್ತಿರುವ ತಾತ್ಸಾರ ಪ್ರತಿ ವರ್ಷ ಸೇರಿಕೊಳ್ಳುತ್ತಲೇ ಸಾಗಿದೆ.
ಸರ್ಕಾರಿ ಶಾಲೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತ ಸಾಗುತ್ತಿರುವುದರಿಂದ ಮಕ್ಕಳ ಕಲಿಕೆಗೆ ಪೆಟ್ಟು ಬಿದ್ದಿದೆ. ಕಳೆದ ವರ್ಷ ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಶೇ.84.02 ಉತ್ತೀರ್ಣತೆ ಪ್ರಮಾಣದ ಮೂಲಕ 30ನೇ ಸ್ಥಾನದಲ್ಲಿತ್ತು. 2024ರಲ್ಲಿ ಶೇ.63.49ರ ಸಾಧನೆ ಮಾಡಿ ಶೋಚನೀಯ ಸ್ಥಿತಿಗೆ ತಲುಪಿದೆ. ಜಿಲ್ಲಾಡಳಿತದ ಫಲಿತಾಂಶ ಸುಧಾರಣೆಗೆ ನಿರಂತರ ಕ್ರಮ ಕೈಗೊಳ್ಳುವಂಥ ಪರಿಸ್ಥಿತಿಯಿದ್ದು, ಅಗತ್ಯ ಪ್ರಮಾಣದ ಶಿಕ್ಷಕರಿಲ್ಲದೆ ಅತಿಥಿ ಶಿಕ್ಷಕರನ್ನು ಪ್ರತಿ ವರ್ಷ ನೇಮಿಸುತ್ತಾ ಪಾಠ ಮಾಡಿಸುವ ಕ್ರಮದಿಂದ ಒಟ್ಟಾರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೆಟ್ಟು ಬಿದ್ದಿದೆ. ಶಿಕ್ಷಕರ ನೇಮಕಕ್ಕೆ ನಾನಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದರಲ್ಲಿಯೇ ಸರ್ಕಾರ ಕಾಲಹರಣ ಮಾಡುತ್ತಿದ್ದು, ಪರಿಣಾಮ ಶಿಕ್ಷೆ ಮಕ್ಕಳಿಗೆ ದೊರೆಯುವಂತೆ ಮಾಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ 686 ಕಿರಿಯ ಪ್ರಾಥಮಿಕ ಹಾಗೂ 777 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಈ ಶಾಲೆಗಳಲ್ಲಿ ಸರ್ಕಾರದ ವರದಿಯಂತೆ 3205 ಶಿಕ್ಷಕರ ಹುದ್ದೆಗಳು ಖಾಲಿಯಿವೆ. ನಾನಾ ಕಾರಣಗಳಿಗೆ ಶಿಕ್ಷಕರ ವರ್ಗಾವಣೆ ಮಾಡುವುದು, ನಿಯೋಜನೆ ಮೇರೆಗೆ ಬೇರೆಡೆ ಶಿಕ್ಷಕರನ್ನು ನೇಮಿಸುವುದರಿಂದ ಈ ಹುದ್ದೆಗಳು ಪ್ರಸಕ್ತ ವರ್ಷವೂ ಖಾಲಿಯಿವೆ. ಮಕ್ಕಳಿಗೆ ಪ್ರಮುಖವಾಗಿ ವಿಷಯ ಗಣಿತ, ಇಂಗ್ಲಿಷ್, ವಿಜ್ಞಾನ ಬೋಧನೆಗೆ ಪೂರ್ಣಾವಧಿ ಶಿಕ್ಷಕರಿಲ್ಲ. ಪ್ರೌಢಶಾಲೆಗಳಲ್ಲೂ ಇಂಥದ್ದೇ ದುಸ್ಥಿತಿಯಿದೆ. ಜಿಲ್ಲೆಯಲ್ಲಿ ಸರ್ಕಾರದ ಒಟ್ಟು 205 ಪ್ರೌಢಶಾಲೆಗಳಿದ್ದು, ಅವುಗಳಲ್ಲಿ 707 ಬೋಧಕರ ಹುದ್ದೆಗಳು ಖಾಲಿಯಿವೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರು ನಿವೃತ್ತಿ, ವರ್ಗಾವಣೆ ನಂತರ ತೆರವಾಗುವ ಹುದ್ದೆಗಳ ಭರ್ತಿಗೆ ಸರಳ ವಿಧಾನವಾಗಿ ಅತಿಥಿ ಶಿಕ್ಷಕರ ನೇಮಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಶೈಕ್ಷಣಿಕ ವರ್ಷಾರಂಭದಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಕರೆಯುವುದು ರೂಢಿ ಮಾಡಿಕೊಂಡಿದೆ. ಪರಿಣಾಮ ಶಿಕ್ಷಕರ ಕೊರತೆಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ಗೋಜಿಗೆ ಹೋಗದಿರುವುದು ಎದ್ದು ಕಾಣುತ್ತಿದೆ.
ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗೆ ಪ್ರತಿಯಾಗಿ ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಕ್ರಿಯೆ ನಡೆಸಲು ಸರ್ಕಾರದಿಂದ ಸೂಚನೆ ಬಂದಿದೆ. ನೇಮಕಾತಿಗೆ ಚಾಲನೆ ಕೊಡಲಾಗಿದೆ. ಕಾಯಂ ಶಿಕ್ಷಕರ ನೇಮಕಾತಿ ವರೆಗೆ ಇದು ಅನಿವಾರ್ಯವೂ ಆಗಿದೆ.| ಕೆ.ಬಿ.ಬಡಿಗೇರ್ ಡಿಡಿಪಿಐ,ರಾಯಚೂರು.