ರಾಯಚೂರು: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್ ನೋಟೀಸ್ ವಿಚಾರ ಇದೀಗ ರಾಯಚೂರು ಜಿಲ್ಲೆಗೂ ಕಾಲಿಟ್ಟಿದ್ದು, ಕೇವಲ ರೈತರ ಜಮೀನುಗಳಿಗೆ ಮಾತ್ರವಲ್ಲದೇ ವಿಚಾರ ಸ್ಲಂ ನಿವಾಸಿಗಳಿಗೂ ಕಂಟಕವಾಗಿದೆ. ಇಷ್ಟು ದಿನ ನೋಟೀಸ್‌ಗಳ ಮೂಲಕ ನಡೆಯುತ್ತಿದ್ದ ವಿಚಾರ ಇದೀಗ ಮೌಖಿಕ ಸೂಚನೆಗಳಿಂದಲೂ ನಡಯುತ್ತಿವೆ.
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಫಲಾನುಭವಿಗಳ ಕೈ ಸೇರಬೇಕಾಗಿದ್ದ ನಿವೇಶನಗಳು ಕೈತಪ್ಪಿ ಹೋಗುತ್ತಿದ್ದು, ನಿವೇಶನಗಳಿರುವ ಜಮೀನು ವಕ್ಫ್ ಆಸ್ತಿಯೆಂದು ಹಕ್ಕುಪತ್ರ ನೀಡುತ್ತಿಲ್ಲ. ಈ ವಿಚಾರವಾಗಿ ವಕ್ಫ್ ಸಚಿವ ಜಮೀರ್ ಅಹ್ಮದ ಖಾನ್ ಮೌಖಿಕ ಸೂಚನೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಸ್ಕಿ ಪಟ್ಟಣದ 263 ಸ್ಲಂ ನಿವಾಸಿಗಳಿಗೆ ಸೇರಬೇಕಾಗಿದ್ದ ಹಕ್ಕುಪತ್ರಗಳು, ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಕೊಳೆಯುತ್ತಿವೆ. ಜು.29ರಂದು ಮಸ್ಕಿ ಪಟ್ಟಣದ ಗಾಂಧಿನಗರ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ವಸತಿ ಇಲಾಖೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಳ್ಳಲಾಗಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಏಕಾಏಕಿ ರದ್ದುಗೊಂಡಿತ್ತು.
ನಿವೇಶನಗಳಿರುವ ಕೊಳಗೇರೆ ಪ್ರದೇಶದ ಜಮೀನು ವಕ್ಫ್ ಆಸ್ತಿಯಾಗಿದೆ ಎಂದು ಅಧಿಕಾರಿಗಳು ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ. ಕಾರ್ಯಕ್ರಮ ರದ್ದಾದ ಬಳಿಕ ಒಂದು ತಿಂಗಳ ನಂತರ ಮತ್ತೆ ನಡೆಸುವುದಾಗಿ ಮಂಡಳಿಯ ಅಧಿಕಾರಿಗಳು ತಿಳಿಸಿದ್ದರು. ಆದರೆ ಮೂರು ತಿಂಗಳು ಪೂರ್ಣಗೊಂಡರು ಅಧಿಕಾರಿಗಳು ಹಕ್ಕುಪತ್ರ ವಿತರಣೆ ಮಾಡುತ್ತಿಲ್ಲ. ಇದಕ್ಕೆ ವಕ್ಫ್ ಸಚಿವರ ಒತ್ತಡವಿದೆ ಎಂಬ ಮಾತುಗಳು ಅಲ್ಲಿನ ನಿವಾಸಿಗಳಿಂದ ಕೇಳಿಬರುತ್ತಿವೆ.
ಮಸ್ಕಿ ಪಟ್ಟಣದ ವಾರ್ಡ್ ನಂ.23ರ ಸರ್ವೆ ನಂ.7/1ರ ಏಳು ಎಕರೆ ಇನಾಮು ಜಮೀನನ್ನು ಅಲ್ಲಿನ ಸಾಜೀದ್ ಸಾಬ್ ಖಾಜಿ ಎಂಬಾತನ ಹೆಸರಿಗಿತ್ತು. 2023ರ ಆ.14ರಂದು ಕರ್ನಾಟಕ ಕೊಳಗೇರೆ ಅಭಿವೃದ್ಧಿ ಮಂಡಳಿ ಹೆಸರಿನಲ್ಲಿ ಈ ಜಮೀನಿನ ಪಹಣಿ ನೋಂದಣಿಯಾಗಿದೆ.
ಹಕ್ಕುಪತ್ರ ಪಡೆಯಲು 1ಸಾವಿರ ರೂ.ಗಳ ಡಿಡಿಯನ್ನು ಸ್ಲಂ ಬೋರ್ಡ್‌ಗೆ ಕಟ್ಟಿ ಪತ್ರಕ್ಕಾಗಿ ಅಲ್ಲಿನ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಹಕ್ಕುಪತ್ರ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ವಕ್ಫ್ ಮಂಡಳಿಯ ಮೌಖಿಕ ಆದೇಶದಿಂದ ಆಘಾತ ಉಂಟಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಈ ಜಮೀನಿನಲ್ಲಿ ವಾಸಿಸುವ ಜನರಿಗೆ ಹಕ್ಕುಪತ್ರ ನೀಡಲು ತಯಾರಿ ನಡೆಸಲಾಗಿತ್ತು. ಆದರೆ ಅದೇ ಸಮಯಕ್ಕೆ ಮಸ್ಕಿ ಉಪಚುನಾವಣೆ ಏರ್ಪಟ್ಟಿದ್ದರಿಂದ ಹಕ್ಕುಪತ್ರ ವಿತರಣೆ ಸಾಧ್ಯವಾಗಿರಲಿಲ್ಲ. ಜನರಿಗೆ ಸಿಗಬೇಕಾದ ಹಕ್ಕುಪತ್ರಗಳು ವಕ್ಫ್ ಮಂಡಳಿಯ ಕರಿನೆರಳಿನಿಂದ ಜನರ ಕೈಸೇರದೇ ಬದುಕು ಕತ್ತಲೆಯಾಗಿದೆ.
ಮಸ್ಕಿಯಲ್ಲಿ ನಡೆಯಬೇಕಾಗಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮ ರಾಯಚೂರು ಉಪವಿಭಾಗದಿಂದ ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮದ ಎರಡು ದಿನಗಳ ಹಿಂದೆ ರಾಯಚೂರು ವಕ್ಫ್ ಕಚೇರಿಯಿಂದ ಮಸ್ಕಿಯಲ್ಲಿ ಸ್ಲಂ ಬೋರ್ಡ್ ಹೆಸರಿನಲ್ಲಿರುವ ಜಮೀನು ವಕ್ಫ್ ಆಸ್ತಿಯಾಗಿದೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ತಿಳಿಸಲಾಗಿತ್ತು. ನಂತರ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕೇಂದ್ರ ಕಚೇರಿಯಿಂದ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿಯೇ ಕಾರ್ಯಕ್ರಮ ರದ್ದಾಗಿದೆ ಎಂಬ ಮಾಹಿತಿ ಇಲಾಖೆಯ ಅಧಿಕಾರಿಗಳಿಂದ ತಿಳಿದುಬಂದಿದೆ.
ವಕ್ಫ್ ಆಸ್ತಿಯೆಂದು ಹೇಳಲಾಗುತ್ತಿರುವ ಸ್ಲಂ ಬೋರ್ಡ್ ಜಮೀನಿನ ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಕೇಂದ್ರ ಕಚೇರಿಯಿಂದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ದೇವೇಂದ್ರಕುಮಾರ, ಎಇಇ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಉಪವಿಭಾಗ ರಾಯಚೂರು. ದಾಖಲೆಗಳೇ ತಿಳಿಸುತ್ತಿವೆ ಅದು ಸ್ಲಂ ಬೋರ್ಡ್‌ನ ಆಸ್ತಿಯೆಂದು. ವಕ್ಫ್ ಬೋರ್ಡ್ ಎನ್ನುವುದಕ್ಕೆ ದಾಖಲೆಗಳಿಲ್ಲ. ಮುಂದೆ ಜನರ ಪರವಾಗಿ ನಿಂತು ಯಾವುದೇ ಕಾರಣಕ್ಕೂ ಜನರ ನಿವೇಶನಗಳಿರುವ ಜಮೀನು ವಕ್ಫ್ ಬೋರ್ಡ್‌ಗೆ ಹೋಗಲು ಬಿಡುವುದಿಲ್ಲ. ಕಾನೂನು ಹೋರಾಟಕ್ಕೂ ಸಿದ್ಧ. | ಪ್ರತಾಪ್‌ಗೌಡ ಪಾಟೀಲ್, ಮಾಜಿ ಶಾಸಕ, ಮಸ್ಕಿ ವಿಧಾನಸಭಾ ಕ್ಷೇತ್ರ