ಸಿಂಧನೂರು: ಮಕ್ಕಳಲ್ಲಿ ದೇಶ ಪ್ರೇಮ ಹೆಚ್ಚಿಸುವ ಕಾರ್ಯ ನಡೆಯಬೇಕಿದ್ದು, ಭ್ರಾತೃತ್ವವನ್ನೂ ಬೆಳೆಸಬೇಕೆಂದು ಯೋಧ ನಾಗೇಶ ಕಣ್ಣೇರ್ ಹೇಳಿದರು.
ನಗರದ ಉಪ್ಪಾರವಾಡಿಯ ಗುರುಸಿದ್ದಯ್ಯನಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಡೇಷನ್ ಹಾಗೂ ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್‌ನಿಂದ ಶನಿವಾರ ಆಯೋಜಿಸಿದ್ದ ರಕ್ಷಾ ಹಾಗೂ ವೃಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾತಂತ್ರ್ಯದ ಅಮೃತೋತ್ಸವ ದೇಶದ ಘನತೆ ಹೆಚ್ಚಿಸಿದೆ. ಎಲ್ಲ ಕಡೆಗಳಲ್ಲಿ ತಿರಂಗಾ ಧ್ವಜದ ಜಾಥಾ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ರಕ್ಷಾ ಬಂಧನದೊಂದಿಗೆ ವೃಕ್ಷಾ ಬಂಧನ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ, ನಮ್ಮ ಸಂಸ್ಕೃತಿ ಜತೆಗೆ ಪರಿಸರ ಕಾಳಜಿಯಿಂದಾಗಿ ಗಿಡಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ವೃಕ್ಷಾ ಬಂಧನ ಆಚರಣೆ ಮಾಡಲಾಗುತ್ತಿದೆ ಎಂದರು. ಮುಖ್ಯಶಿಕ್ಷಕ ಸುರೇಶ ಪರಿಸರ ಸ್ನೇಹಿ ಬ್ಯಾಡ್ಜ್‌ಗಳನ್ನು ಉಚಿತವಾಗಿ ವಿತರಿಸಿದರು. ವಸಿಷ್ಠಧಾಮದ ಸಂಚಾಲಕ ನವಲಿ ಭೀಮಾಚಾರ್ಯ, ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ ದೇಶಪಾಂಡೆ, ಸಹ ಕಾರ್ಯದರ್ಶಿ ಚನ್ನವೀರನಗೌಡ, ಭೂ ಸಂರಕ್ಷಣಾ ತಾಲೂಕು ಅಧ್ಯಕ್ಷ ಮುದುಕಪ್ಪ ಹೊಸಳ್ಳಿಕ್ಯಾಂಪ್ ಇದ್ದರು.