ಜಿಲ್ಲೆ

ಪಿಡಿಒ ಪರೀಕ್ಷೆ ಗಲಾಟೆಯಲ್ಲಿ ಮುಖ್ಯಸ್ಥರ ತಪ್ಪಿದೆ: ರಜಾಕ್ ಉಸ್ತಾದ್

ರಾಯಚೂರು: ಕೆಪಿಎಸ್‌ಸಿಯಿಂದ ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೊಂದಲ ಸೃಷ್ಠಿಸಲಾಗಿದೆ ಎಂದು 12 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಸಿಂಧನೂರು ನಗರದಲ್ಲಿ ನ.17ರಂದು ಪಿಡಿಒ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮವಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಇತರೆ ಅಭ್ಯರ್ಥಿಗಳಿಗೆ ಗೊಂದಲ ಸೃಷ್ಠಿಸಿದ್ದಾರೆಂಬ ಕಾರಣಕ್ಕೆ ಅಭ್ಯರ್ಥಿಗಳ ವಿರುದ್ಧ ತರಾತುರಿಯಲ್ಲಿ ಕೇಸ್ ದಾಖಲಿಸಲಾಗಿದೆ. ಪರೀಕ್ಷಾ ಮುಖ್ಯಸ್ಥರ ತಪ್ಪಿಗಾಗಿ ಅಭ್ಯರ್ಥಿಗಳ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ  ಎಂದು ದೂರಿದರು.
ಸಿಂಧನೂರು ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ 35 ರೂಮ್‌ಗಳಲ್ಲಿ 800ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. 24 ಅಭ್ಯರ್ಥಿಗಳಿದ್ದ ಕೊಠಡಿಯಲ್ಲಿ ಕೇವಲ 12 ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನಿಡಲಾಗಿಲ್ಲ. ಜತೆಗೆ ಪ್ರಶ್ನೆ ಪತ್ರಿಕೆ ಇರುವ ಬಂಡಲ್‌ಗಳನ್ನು ಮೊದಲೇ ತೆರಯಲಾಗಿದೆ. ಇದನ್ನು ಪ್ರಶ್ನಿಸಿದ ಅಭ್ಯರ್ಥಿಗಳ ವಿರುದ್ಧ ಅಲ್ಲಿನ ಪರೀಕ್ಷಾ ಮುಖ್ಯಸ್ಥ ಬಸವರಾಜ ತಡಕಲ್ ಎಫ್‌ಐಆರ್ ದಾಖಲಿಸಿದ್ದಾರೆ ಎಂದರು.
ಕೂಡಲೇ ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಪ್ರಶ್ನೆ ಪತ್ರಿಕೆ ಸರಿಯಾಗಿ ಮುಟ್ಟಿಸಿದ ಸಿಬ್ಬಂದಿ ಹಾಗೂ ಪರೀಕ್ಷಾ ಮುಖ್ಯಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯ ಮಹ್ಮದ್ ಉಸ್ಮಾನ್ ಇದ್ದರು.