ರಾಯಚೂರು: ನಗರದ ಸಂತೋಷನಗರ ಬಡಾವಣೆಯಲ್ಲಿನ ಶಾಲೆ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂಬ ಹಿನ್ನೆಲೆ ಮಂಗಳವಾರ ತಡರಾತ್ರಿ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ದೇವಸ್ಥಾನವನ್ನು ನೆಲಸಮಗೊಳಿಸಲಾಗಿದೆ.
ಸರ್ಕಾರಿ ಶಾಲೆ ನಿರ್ಮಾಣ ಮಾಡಲು ಹಂಚಿಕೆಯಾಗಿದ್ದ ಸಿಎ ಸೈಟ್‌ನಲ್ಲಿ ಅಕ್ರಮವಾಗಿ ಶಿವ ಹಾಗೂ ಗಣೇಶ ಮೂರ್ತಿಗಳನ್ನಿಟ್ಟು ದೇವಸ್ಥಾನ ನಿರ್ಮಿಸಲಾಗಿದೆ. ಶಾಲೆ ಕಟ್ಟಡ ಕಾಮಗಾರಿ ಆರಂಭಿಸಲು ದೇವಸ್ಥಾನವನ್ನು ತೆರವುಗೊಳಿಸುವಂತೆ ಡಿಸಿ ಕೆ.ನಿತೀಶ ನೀಡಿದ ಆದೇಶದ ಮೇರೆಗೆ ಸಹಾಯಕ ಆಯುಕ್ತ ಗಜಾನನ ಬಾಲೆ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೆಮಠ, ಹಾಗೂ ತಹಸೀಲ್ದಾರ್ ಸುರೇಶ ವರ್ಮಾ ನೇತೃತ್ವದಲ್ಲಿ ರಾತ್ರಿ 1.30ರ ಸುಮಾರಿಗೆ ತೆರವು ಕಾರ್ಯಚರಣೆ ಕೈಗೊಳ್ಳಲಾಗಿದೆ.
ಜೆಸಿಬಿಯಿಂದ ದೇವಸ್ಥಾನವನ್ನು ನೆಲಸಮಗೊಳಿಸಿ ದೇವಸ್ಥಾನದಲ್ಲಿದ್ದ ಶಿವ, ಗಣೇಶ ಹಾಗೂ ನಾಗ ಮೂರ್ತಿಗಳನ್ನು ಸುರಕ್ಷಿತವಾಗಿ ಚಿಕ್ಕಸುಗೂರು ಮಠಕ್ಕೆ ಸ್ಥಳಾಂತರಿಸಲಾಯಿತು.
ತೆರವು ಕಾರ್ಯಾಚರಣೆ ವೇಳೆ ಸ್ಥಳೀಯರಿಂದ ವಿರೋಧವು ಕೇಳಿಬಂದಿದ್ದು, ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ಶಂಕ್ರಪ್ಪ, ಬಿಜೆಪಿ ನಗರಾಧ್ಯಕ್ಷ ರಾಘವೇಂದ್ರ ಉಟ್ಕೂರು, ಮಾಜಿ ಶಾಸಕ ಎ.ಪಾಪಾರೆಡ್ಡಿ, ಪ್ರಮುಖರಾದ ಆಂಜನೇಯ್ಯ ಕಡಗೋಲ, ಶಂಕರ್ ರೆಡ್ಡಿ, ರವೀಂದ್ರ ಜಲ್ದಾರ್, ನರಸರೆಡ್ಡಿ, ಶ್ರೀನಿವಾಸ ರೆಡ್ಡಿ, ನಾಗರಾಜ್ ಬಾಲ್ಕಿ, ಅಮರ್‌ಜೀತ್ ಪಾಟೀಲ್, ಮೌನೇಶ, ಪಿ.ಯಲ್ಲಪ್ಪ, ನರಸಿಂಹಲು ಸೇರಿದಂತೆ ಇತರಿದ್ದರು.
ಸಂತೋಷನಗರ ಬಡಾವಣೆಯಲ್ಲಿ ದೇವಸ್ಥಾನ ನೆಲಸಮ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಬುಧವಾರ ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿಯ ಪ್ರಮುಖರು ತೆರಳಿ ಡಿಸಿ ಕೆ.ನಿತೀಶ ಜತೆಗೆ ದೇವಸ್ಥಾನ ನೆಲಸಮ ಮಾಡಲಾದ ಘಟನೆಯ ಕುರಿತು ಚರ್ಚಿಸಿದರು.
ಸರ್ಕಾರ ಒಂದು ಸಮುದಾಯದ ಪರವಾಗಿ ಕೆಲಸ ಮಾಡುತ್ತಾ. ಸಮಾಜದ ಇತರೆ ಸಮುದಾಯಗಳ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಕೂಡಲೇ ತೆರವುಗೊಳಿಸಲಾದ ದೇವಸ್ಥಾನವನ್ನು ಮರು ನಿರ್ಮಾಣ ಮಾಡಬೇಕು.|ಡಾ.ಶಿವರಾಜ ಪಾಟೀಲ್, ನಗರ ಶಾಸಕ ರಾಯಚೂರು. ಎರಡು ವರ್ಷಗಳ ಹಿಂದೆಯೇ ನಿವೇಶನ ಸರ್ಕಾರಿ ಶಾಲೆಗಾಗಿ ಹಂಚಿಕೆಯಾಗಿದೆ. ಅದು ಸರ್ಕಾರಿ ಜಾಗವಾಗಿದ್ದು, ದೇವಸ್ಥಾನ ನಿರ್ಮಾಣವಾದ್ದರಿಂದ ಶಾಲೆ ಕಟ್ಟಡ ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ನಿಯಮಾನುಸಾರ ದೇವಸ್ಥಾನವನ್ನು ತೆರವುಗೊಳಿಸಲಾಗಿದೆ. |ಕೆ.ನಿತೀಶ, ಡಿಸಿ ರಾಯಚೂರು