ರಾಯಚೂರು: ಮಳೆಗಾಲ ಆರಂಭವಾಗಿದ್ದು ರಾಜ್ಯದ ರೈತರ ಹಾಗೂ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಹಾಗೂ ರಾಜ್ಯದ ಅಭಿವೃದ್ಧಿ ಕುರಿತು ಅಧಿವೇಶನದಲ್ಲಿ ಚರ್ಚೆಗಳನ್ನು ಮಾಡದೇ ಆಡಳಿತ ಹಾಗೂ ವಿರೋಧ ಪಕ್ಷಗಳು ಪರಸ್ಪರ ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಹೇಳಿದರು.
ಇದನ್ನೂ ಓದಿ: ರೈತರ ಸಮಸ್ಯೆಗಳ ಕೇಳುವರಿಲ್ಲ
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸೋಮವಾರ ಮಾತನಾಡಿ, ವಾಲ್ಮೀಕಿ ಹಗರಣ ಸೇರಿ ಇನ್ನಿತರ ಭ್ರಷ್ಟಾಚಾರಗಳ ಕುರಿತು ಪಕ್ಷಗಳು ವಾದ ವಿವಾದಗಳನ್ನು ಮಾಡುತ್ತಾ, ರಾಜ್ಯದಲ್ಲಿರುವ ರೈತರ ಸಮಸ್ಯೆ, ಬೆಲೆ ಏರಿಕೆ, ಉದ್ಯೋಗ, ಸೇರಿದಂತೆ ಇನ್ನಿತರ ಸಾರ್ವಜನಿಕರ ಸಮಸ್ಯೆಗಳ ಕುರಿತು ಮರೆತು ಹೋಗುತ್ತಿದ್ದಾರೆ.
ಮಳೆಗಾಲ ಆರಂಭವಾಗಿದ್ದು, ರಾಜ್ಯದಲ್ಲಿ ವಿವಿಧೆಡೆ, ಬೆಳೆಹಾನಿ, ಪ್ರವಾಹ, ಜೀವ ಹಾನಿಗಳು ಸಂಭವಿಸುತ್ತಿದ್ದರೂ ಸರ್ಕಾರ ಹಾಗೂ ವಿರೋಧ ಪಕ್ಷದವರು ಧ್ವನಿಯೆತ್ತುತ್ತಿಲ್ಲ. ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದು, ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಆದರೆ ಜನಪ್ರತಿನಿಧಿಗಳು ಒಬ್ಬರ ಮೇಲೋಬ್ಬರು ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಇಲಾಖೆಗಳು ತಮ್ಮ ಜವಾಬ್ದಾರಿಗಳನ್ನು ಮರೆತಿವೆ. ಇಲಾಖೆಗಳಿಂದ ಜನರಿಗೆ ಸಿಗುವ ಯೋಜನೆಗಳ ಸೌಲಭ್ಯಗಳನ್ನು ನೀಡದೇ ಭ್ರಷ್ಟಾಚಾರದಲ್ಲಿ ತೊಡಗಿವೆ. ಸರ್ವೆ ಇಲಾಖೆಯಿಂದ ಸರ್ವೆ ಮಾಡಲು ಲಂಚ ಸ್ವೀಕರಿಸಲಾಗುತ್ತಿದ್ದು, ಜತೆಗೆ ಜಿಲ್ಲೆಯಲ್ಲಿ ಭೂ ದಾಖಲೆಗಳ ಇಲಾಖೆಗೆ ಸಹಾಯಕ ನಿರ್ದೇಶಕರು ಮೂರು ತಾಲೂಕಿಗೆ ಒಬ್ಬರೇ ಇದ್ದು, ರೈತರಿಗೆ ಇದರಿಂದ ತೊಂದರೆ ಉಂಟಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಮಯ್ಯ ಜವಳಗೇರಾ, ತಿಮ್ಮಣ್ಣ ಭೊವಿ, ವೆಂಕಟೇಶ್, ಶಿವರಾಜ್ ಆಲ್ದಾಳ, ಮಂಜುನಾಥ ಚಿಕ್ಕಸುಗೂರು, ನಾಗಪ್ಪ ಬೂದಿಹಾಳ, ಚೆನ್ನಪ್ಪ ಸೇರಿದಂತೆ ಇತರರಿದ್ದರು.