| ಅಧ್ಯಾತ್ಮ, ಶಿಕ್ಷಣ, ಇಂಗ್ಲಿಷ್ ಗ್ರಾಮರ್ ಕೃತಿಗಳ ಲೋಕಾರ್ಪಣೆ
ರಾಯಚೂರು: ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕೇವಲ ಬೋಧನೆಗೆ ಸಿಮೀತವಾಗಿದ್ದು, ಮಕ್ಕಳಲ್ಲಿ ಸಂಸ್ಕಾರ ಬೆಳೆಸುವಂತಹ ಶಿಕ್ಷಣವನ್ನು ನಾವು ನೀಡುತ್ತಿಲ್ಲ. ಪಠ್ಯಕ್ರಮದ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಇಂದಿನ ಅವಶ್ಯ ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜೆ.ಎಂ.ಶರಣಯ್ಯಸ್ವಾಮಿ ಅಧ್ಯಾತ್ಮ ಮತ್ತು ಶಿಕ್ಷಣ ಹಾಗೂ ಇಂಗ್ಲಿಷ್ ಗ್ರಾಮರ್ ಕೃತಿಗಳನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಇಂದಿನ ಮಕ್ಕಳು ತಂದೆ, ತಾಯಿಗೆ ಗೌರವ ಕೊಡದಷ್ಟು ಸಂಸ್ಕಾರ ಹೀನರಾಗುತ್ತಿರುವುದು ದುಃಖಕರ ವಿಷಯ ಎಂದರು.
ಕೋವಿಡ್‌ನಿಂದಾಗಿ ಶಿಕ್ಷಣ ವ್ಯವಸ್ಥೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಜ್ಞಾನಾರ್ಜತೆಗೆ ತೊಡಕಾಗಿದೆ. ಮನುಷ್ಯನಲ್ಲಿ ಸಂಸ್ಕಾರ ಇದ್ದಾಗ ಮಾತ್ರ ವಿದ್ಯೆಗೆ ಬೆಲೆ ಬರುತ್ತಿದ್ದು, ಸಂಸ್ಕಾರ ಮತ್ತು ವಿದ್ಯೆ ಇರುವ ವ್ಯಕ್ತಿ ಮಾತ್ರ ಜೀವನದಲ್ಲಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಸಾಹಿತ್ಯ ಹರಿಯುವ ನದಿಯಂತಿರಬೇಕು. ಕೃತಿಗಳ ಸಂಖ್ಯೆ ಹೆಚ್ಚಾಗುವುದರ ಜತೆಗೆ ಗುಣಮಟ್ಟದ ಸಾಹಿತ್ಯ ಹೊರಬರಬೇಕಾಗಿದೆ. ಜಿಲ್ಲೆಯಲ್ಲಿ ಸಾಹಿತ್ಯ ಪ್ರತಿಭೆಗಳಿಗೆ ಬರವಿಲ್ಲ. ಆದರೆ ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು. ಸಾಹಿತಿ ಪಲಗುಲ ನಾಗರಾಜ, ಶಿಕ್ಷಕ ಚಂದ್ರಶೇಖರ ಸ್ವಾಮಿ ಇತರರಿದ್ದರು.