ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಶಾಂತರಸರ ಕೊಡುಗೆ ಅಪಾರವಾದದ್ದು ಎಂದು ಹಿರಿಯ ಸಾಹಿತಿ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ನಾಡೋಜ ಡಾ.ಶಂತರಸ ಹೆಂಬೆರಾಳು ಜನ್ಮ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಸಾಂಸ್ಕೃತಿಕ ಮೀಸಲಾತಿ ಒದಗಿಸಬೇಕು. ಈ ಭಾಗದ ವಿಶ್ವವಿದ್ಯಾಲಯಗಳಿಗೆ ಕುಲಪತಿ, ಮಂಡಳಿ, ಅಭಿವೃದ್ಧಿ ಪ್ರಾಧಿಕಾರ, ಅಕಾಡೆಮಿಗಳಿಗೆ ಅಧ್ಯಕ್ಷರಾಗಲು ಕಲ್ಯಾಣ ಕರ್ನಾಟಕ ಭಾಗದವರಿಗೆ ಪ್ರಥಮ ಆಧ್ಯತೆ ನೀಡುವಂತೆ ಪ್ರಸ್ತಾಪಿಸಿದವರಲ್ಲಿ ಶಾಂತರಸರ ಮೊದಲಿಗರು ಎಂದು ತಿಳಿಸಿದರು.
ಹೈದ್ರಾಬಾದ್ ನಿಜಾಮರ ಆಳ್ವಿಕೆಯ ಸಂದರ್ಭದಲ್ಲಿ ಹೆಚ್ಚಾಗಿ ಉರ್ದು, ತೆಲುಗು, ಮರಾಠಿ, ಭಾಷಿಗರಿದ್ದರು. ಆ ವೇಳೆಯಲ್ಲಿ ಉರ್ದು ಭಾಷೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿತ್ತು. ಉರ್ದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದರಿಂದ ಈ ಭಾಗವು ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣವಾಯಿತು ಎಂದರು.
ನವಾಬರು ಈ ಭಾಗದಲ್ಲಿ ಭಾವಿಗಳನ್ನು, ಆಣೆಕಟ್ಟು ನಿರ್ಮಾಣಕ್ಕೆ ಆಧ್ಯತೆ ನೀಡಿದ್ದರು ಆದರೆ ಮೈಸೂರು ರಾಜರು ವಿಶ್ವವಿದ್ಯಾಲಯ ಸ್ಥಾಪನೆ, ವಿದ್ಯುತ್‌ಚಕ್ತಿ ಕಾರ್ಖಾನೆಗಳಿಗೆ ಪ್ರಾರಂಭಿಸಲಾಯಿತು. ಮೈಸೂರು ಭಾಗ ಶೈಕ್ಷಣಿಕವಾಗಿ ವೇಗ ಪಡೆಯಿತು ಎಂದು ತಿಳಿಸಿದರು.
ಇದೇ ವೇಳೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ಶಾಂತರಸರು ಜಿಲ್ಲೆಗೆ ಮಾತ್ರ ಸೀಮಿತರಾದವರಲ್ಲ ಕರ್ನಾಟಕಕ್ಕೆ ಬಹುದೊಡ್ಡ ಧ್ವನಿಯಾಗಿದ್ದಾರೆ. ಗಜಲ್‌ಸಾಹಿತ್ಯವನ್ನು ಉರ್ದು ಭಾಷೆಯಿಂದ ಕನ್ನಡಕ್ಕೆ ತಂದು ತಮ್ಮ ಗಜಲ್‌ಗಳಿಂದ ಕನ್ನಡ ಭಾಷೆಯಲ್ಲಿರುವ ಕೋಮಲತೆಯನ್ನು ನಾಡಿಗೆ ಪರಿಚಯಿಸಿದ್ದಾರೆ ಎಂದರು.
ಸಾಹಿತಿಗಳಾದ ದಸ್ತಗಿರಿಸಾಬ್ ದಿನ್ನಿ ಅವರಿಂದ ಶಾಂತರಸರ ಬದುಕು ಬರಹ, ಡಾ.ಶಿವಯ್ಯ ಹಿರೆಮಠ ಅವರಿಂದ ಶಾಂತರಸರ ಕಥೆ, ಕಾದಂಬರಿ, ಡಾ.ವಿಕ್ರಂ ವಿಸಾಜಿ ಅವರಿಂದ ಶಾಂತರಸರ ಕಾವ್ಯ, ಗಜಲ್‌ಗಳು ಹಾಗೂ ಮಹಾಂತೇಶ ನವಲಕಲ್ ಅವರಿಂದ ಶಾಂತರಸರ ನಾಟಕಗಳ ಕುರಿತು ವಿಚಾರ ಗೋಷ್ಠಿಗಳು ನಡೆದವು ನಂತರ ಗಜಲ್ ಕವಿಗಳಿಂದ ಗಜಲ್ ಕಾವ್ಯ ವಾಚನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ರಾಮಣ್ಣ ಹವಳೆ, ಅಕಾಡೆಮಿ ಸದಸ್ಯರಾದ ಡಾ.ಸಿ.ಬಿ.ಚಿಲ್ಕರಾಗಿ, ಸಿದ್ದರಾಮ ಹೊನ್ಕಲ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಭಗತರಾಜ ನಿಜಾಮಕಾರಿ, ಶಾಂತರಸ ಹೆಂಬೆರಾಳು ಅವರ ಪುತ್ರ ಎಚ್.ಎಸ್.ಬಸವಪ್ರಭು, ಚುಕ್ಕಿ ಪ್ರತಿಷ್ಠಾನದ ಸಂಸ್ಥಾಪಕ ಚುಕ್ಕಿ ಸೂಗಪ್ಪ, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ಞ್ ಅಳ್ಳುಂಡಿ, ಅಕಾಡೆಮಿಯ ರಿಜಿಸ್ಟ್ರಾರ್ ಎನ್.ಕರಿಯಪ್ಪ, ಕಸಾಪ ಗೌರವ ಕಾರ್ಯದರ್ಶಿ ಬಿ.ತಾಯಪ್ಪ ಹೊಸೂರು, ಕಸಾಪ ತಾಲೂಕಾಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಸೇರಿದಂತೆ ಇತರರಿದ್ದರು.