ರಾಯಚೂರಿನ ಹೊರವಲಯದ ಯರಮರಸ್ ಹತ್ತಿರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಉದ್ದೇಶಿಸಿತ ಸ್ಥಳದಲ್ಲಿ ಸೋಮವಾರ ಕೆಎಸ್‌ಐಡಿಸಿ ಮತ್ತು ಭೂ ದಾಖಲೆಗಳ ಅಧಿಕಾರಿಗಳು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. 
ಜಿಲ್ಲೆ

ಸೆ.17ರಂದು ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ, ಕೆಎಸ್‌ಐಡಿಸಿ ಹಾಗೂ ದೆಹಲಿಯ ರೈಟ್ ಸಂಸ್ಥೆಯ ಅಧಿಕಾರಿಗಳ ತಂಡ ಭೇಟಿ

ರಾಯಚೂರು: ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವ ಜಿಲ್ಲೆಯ ಜನರ ಬೇಡಿಕೆ ಈಡೇರುವ ಲಕ್ಷಣಗಳು ಕಂಡು ಬರುತ್ತಿದ್ದು, ಕಲ್ಯಾಣ ಕರ್ನಾಟಕ ವಿಮೋಚನೆ ದಿನವಾದ ಸೆ.17ರಂದು ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿರುವ ಯರಮರಸ್ ಹತ್ತಿರದ ಸ್ಥಳಕ್ಕೆ ಕೆಎಸ್‌ಐಡಿಸಿ ಹಾಗೂ ದೆಹಲಿಯ ರೈಟ್ ಸಂಸ್ಥೆಯ ಅಧಿಕಾರಿಗಳ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಸ್ಥಳದ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಹಿಂದೆ ನೆಹರು ಪ್ರಧಾನಿಯಾಗಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಷ ಮಾಡಿದ್ದ ಸ್ಥಳವನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿದೆ. ಒಟ್ಟು 400 ಎಕರೆ ಭೂಮಿ ಲಭ್ಯವಿದೆ ಎಂದು ಹೇಳಲಾಗುತ್ತಿದ್ದು, ಅದರಲ್ಲಿ ಮೂರ‌್ನಾಲ್ಕು ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಹೇಳಲಾಗುತ್ತಿದೆ.

ವಿಮಾನ ನಿಲ್ದಾಣಕ್ಕೆ ಗುರುತಿಸಲಾಗಿರುವ 400 ಎಕರೆ ಜತೆಗೆ ಮತ್ತಷ್ಟು ಹೆಚ್ಚುವರಿ ಭೂಮಿ ಅಗತ್ಯವಿರುವ ಕಾರಣ ಸುತ್ತಮುತ್ತಲ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಪ್ರಸ್ತುತ ಇರುವ ಭೂಮಿಯ ಗಡಿ ಗುರುತಿಸುವ ಕಾರ್ಯವನ್ನು ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಭೇಟಿ ನೀಡಿದ ಅಧಿಕಾರಿಗಳು ಲಭ್ಯವಿರುವ ಭೂಮಿಯ ಗಡಿ ಗುರುತಿಗೆ ಸರ್ವೇ ಕಾರ್ಯ ನಡೆಸುವಂತೆ ಹಾಗೂ ಹೆಚ್ಚುವರಿ ಭೂಮಿಯನ್ನು ಗುರುತಿಸಿ ನಕ್ಷೆ ಸಿದ್ಧಪಡಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸಲಹೆ ನೀಡಿದ್ದು, ಎಲ್ಲ ಇಲಾಖೆಗಳು ಸಮನ್ವತೆ ಸಾಧಿಸಿ ಸರ್ವೇ ಕಾರ್ಯ ಪೂರ್ಣಗೊಂಡಲ್ಲಿ ವಿಸ್ತೃತ ಯೋಜನೆ ರೂಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದೆ.

ಈ ಸಂದರ್ಭ ಕೆಎಸ್‌ಐಡಿಸಿ ಪ್ರಧಾನ ವ್ಯವಸ್ಥಾಪಕ ಜಿ.ಉನ್ನಿಕೃಷ್ಣನ್, ಭೂ ದಾಖಲೆ ಇಲಾಖೆಯ ಉಪ ನಿರ್ದೇಶಕ ಭಾವನಾ ಬಸವರಾಜ, ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ್, ಪೌರಾಯುಕ್ತ ಕೆ.ಮುನಿಸ್ವಾಮಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.