ರಾಯಚೂರು: ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ನಿರ್ಲಕ್ಷಿಸದೇ ಚೆನ್ನಾಗಿ ನೋಡಿಕೊಳ್ಳಬೇಕೆಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಚ್.ಎ.ಸಾತ್ವಿಕ್ ಹೇಳಿದರು.
ನಗರದ ತಹಸೀಲ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ್ಡಿದ್ದ ಹಿರಿಯ ನಾಗರಿಕರಿಗೆ ಕಾನೂನು ಅರಿವು ನೀಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು.
ಹಿರಿಯ ನಾಗರಿಕರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ, ಅವರಿಗೆ ಮೂಲಭೂತ ಸೌಲಭ್ಯಗಳು ದೊರೆಯುವಂತೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು. ಒಂದು ವೇಳೆ ಹಿರಿಯ ನಾಗರಿಕರಿಗೆ ಸಮಸ್ಯೆ ಉಂಟಾದಲ್ಲಿ ಕಾನೂನಿನ ನೆರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಹಕ್ಕುಗಳನ್ನು ಕಾನೂನು ಬದ್ಧವಾಗಿ ಚಲಾಯಿಸಲು ಕಾನೂನು ಸೇವೆಗಳ ಪ್ರಾಧಿಕಾರ ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತಿದೆ. ಕಾನೂನಿನ ಸದುಪಯೋಗವನ್ನು ಪ್ರತಿಯೊಬ್ಬ ಹಿರಿಯರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ ರಾಯಚೂರು ತಾಲೂಕಾಡಳಿತದಿಂದ 30 ಅರ್ಹ ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ ಹಾಗೂ 20 ಹಿರಿಯ ನಾಗರಿಕ ಪಿಂಚಣಿ ಯೋಜನೆಯಡಿ ಆದೇಶ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಶ ವರ್ಮಾ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ನಜೀರ್ ಹಮೀದ್, ತಹಸೀಲ್ದಾರ್ ಗ್ರೇಡ್-2 ಸೈಯದ್ ಮೀರ್ ಅನ್ವರ್ ಸೇರಿದಂತೆ ಇತರರಿದ್ದರು.