ಜಿಲ್ಲೆ

ಶಾಲಾ ಮಕ್ಕಳಿಗೆ ವಿತರಿಸಬೇಕಾದ ಶೂ, ಸಾಕ್ಸ್ ರಸ್ತೆ ಬದಿ ಪತ್ತೆ

ರಾಯಚೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ಶಾಲಾ ಮಕ್ಕಳು ಶಾಲೆಯಲ್ಲಿ ಉತ್ತಮ ಗುಣಮಟ್ಟದಿಂದ ಅಭ್ಯಾಸ ಮಾಡಲು ಮತ್ತು ಶಿಸ್ತಿನ ಸಮವಸ್ತ್ರ ಧರಿಸಲು ಪ್ರತಿ ವರ್ಷ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಆದರೆ ಮಕ್ಕಳಿಗೆ ಶೂ, ಸಾಕ್ಸ್ ಸರಿಯಾಗಿ ವಿತರಣೆ ಆಗುತ್ತಿಲ್ಲ ಎಂಬ ದೂರುಗಳು ರಾಯಚೂರು ನಗರದಲ್ಲಿ ಕೇಳಿ ಬರುತ್ತಿವೆ.

ರಾಯಚೂರು ನಗರದ ಲಿಂಗಸುಗೂರು ರಸ್ತೆಯ ಪಕ್ಕದಲ್ಲಿ ಗುರುವಾರ ಬೆಳಿಗ್ಗೆ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗುವ ಶೂ ಮತ್ತು ಸಾಕ್ಸ್ ಬಿಸಾಡಿರುವ ಬಗ್ಗೆ ಸ್ಥಳೀಯರು ಆರೋಪ ಮಾಡಿದ್ದು, ಶಾಲಾ ಶಿಕ್ಷಣ ಇಲಾಖೆ ಈ ಬಗ್ಗೆ ತನಿಖೆ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಬಿಸಾಡಿರುವ ಎಲ್ಲ ಶೂ ಮತ್ತು ಸಾಕ್ಸ್‌ಗಳು ಶಾಲೆ ಮಕ್ಕಳು ಬಳಸುವಂತಹದ್ದಾಗಿದ್ದು, ಶಾಲಾ ಶೂ ಮತ್ತು ಸಾಕ್ಸ್ ಹೊರತುಪಡಿಸಿ ಬೇರ‍್ಯಾವ ಶೂಗಳಾಗಲಿ, ಪಾದರಕ್ಷೆಗಳಾಗಲಿ ಸ್ಥಳದಲ್ಲಿ ಕಂಡುಬಂದಿಲ್ಲ.

ಈ ಘಟನೆ ನಗರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಇಲಾಖೆಯಿಂದ ಹೆಚ್ಚಿನ ತನಿಖೆ ನಡೆಸುವರೇ ಎಂದು ಕಾದು ನೊಡಬೇಕಾಗಿದೆ.