ರಾಯಚೂರು: ನಗರದ ಡ್ಯಾಡಿ ಕಾಲನಿಯಲ್ಲಿನ ರಸ್ತೆ ವಿಸ್ತರಣೆಗಾಗಿ ಕೆಪಿಟಿಸಿಎಲ್ ವಸತಿಗೃಹಗಳನ್ನು ತೆರವು ಮಾಡುತ್ತಿರುವುದನ್ನು ಖಂಡಿಸಿ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದಿಂದ ಡಿಸಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.
ರಸ್ತೆಯ ಮಧ್ಯಭಾಗದಿಂದ ಎರಡು ಬದಿ ಸಮವಾಗಿ ತೆರವುಗೊಳಿಸುವ ಬದಲು ಕೇವಲ ವಸತಿಗೃಹಗಳನ್ನು ತೆರವುಗೊಳಿಸುತ್ತಿರುವುದು ನಿಯಮಬಾಹಿರ. ಚೈತನ್ಯ ಆಸ್ಪತ್ರೆಯಿಂದ ಡ್ಯಾಡಿ ಕಾಲೋನಿ, ಕಾಕತೀಯ ಕಾಲೋನಿ ಮಾರ್ಗವಾಗಿ ಘನತ್ಯಾಜ್ಯ ವಿಲೇವಾರಿ ಘಟಕದವರೆಗೆ ವಿಸ್ತರಣೆ ನಡೆಯುತ್ತಿದೆ. ಇದಕ್ಕಾಗಿ ರಸ್ತೆ ಮಧ್ಯ ಭಾಗದಿಂದ ಎರಡು ಕಡೆ 30 ಅಡಿ ಮಾರ್ಕಿಂಗ್ ಮಾಡಲಾಗಿತ್ತು. ನಗರಸಭೆ ಅಧಿಕಾರಿಗಳು ಮುನ್ಸೂಚನೆ ನೀಡದೆ ವಸತಿಗೃಹಗಳ ತೆರವು ನಡೆಸಿದ್ದಾರೆ. ಕೂಡಲೇ ತೆರವುಗೊಳಿಸಲಾಗಿರುವ ಕಾಂಪೌಂಡ್ ಗೋಡೆ ಹಾಗೂ ವಸತಿಗೃಹಗಳನ್ನು ಮತ್ತೆ ನಿರ್ಮಾಣ ಮಾಡಬೇಕು. ರಸ್ತೆ ಮಧ್ಯ ಭಾಗದಿಂದ ಎರಡು ಬದಿಯಲ್ಲಿ ಸಮಾನಾಂತರವಾಗಿ ತೆರವು ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು.