ರಾಯಚೂರು: ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಆದರೆ ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ಮಾತ್ರ ನೀರು ತಲುಪಿಲ್ಲದಿರುವುದು ಈ ಭಾಗದ ರೈತರಿಗೆ ಉಳಿಗಾಲವಿಲ್ಲದಂತಾಗಿದೆ.
ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, 101.4 ಟಿಎಂಸಿ ನೀರು ಶೇಖರಣೆಯಾಗಿದೆ. ಆದರೆ ಕಾಲುವೆಯ ಮೈಲ್ 10ರಿಂದ 104ರವರೆಗೆ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು, ನೀರಿನ ಪ್ರಮಾಣ ತಗ್ಗುವಿಕೆಯಿಂದ ಕೊನೆ ಭಾಗದ ರೈತರು ಕಂಗಾಲಾಗಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 90 ಹಾಗೂ 104 ಭಾಗದ ರೈತರಿಗೆ ಮೊದಲಿನಿಂದಲೂ ಸಮರ್ಪಕ ನೀರು ದೊರೆಯುತ್ತಿಲ್ಲ ಎಂಬ ಆರೋಪವಿದ್ದು, ಇದೀಗ ಜಲಾಶಯ ತುಂಬಿದ್ದರೂ ರೈತರಿಗೆ ನೀರು ನೀಡದ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೆ.4ರ ವರದಿಯ ಪ್ರಕಾರ ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 10ರ ಗೇಜ್‌ನಲ್ಲಿ 16,060 ಅಡಿ, 4233 ಕ್ಯೂಸೆಕ್ ನಷ್ಟು ನೀರಿನ ಪ್ರಮಾಣ ದಾಖಲಾಗಿತ್ತು ಮೈಲ್ 19, 46, 60, 69ರವರೆಗೆ ಗಣನೀಯವಾಗಿ ಇಳಿಕೆ ಕಂಡ ನೀರಿನ ಪ್ರಮಾಣ ಮೈಲ್ 90 ರಲ್ಲಿ 6152 ಅಡಿ ಅಂದರೆ 609 ಕ್ಯೂಸೆಕ್ ನೀರಿನ ಪ್ರಮಾಣ ದಾಖಲಾಗಿದೆ. ಮುಂದುವರೆದಂತೆ ಕಾಲುವೆಯ ಕೊನೆ ಭಾಗದ 104 ಮೈಲ್‌ನ ಗೇಜ್‌ನಲ್ಲಿ 2667 ಅಡಿ ನೀರಿದ್ದು, ಕೇವಲ 65 ಕ್ಯೂಸೆಕ್ ನೀರಿನ ಪ್ರಮಾಣ ದಾಖಲಾಗಿದೆ.
ಈ ರೀತಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿರುವುದಕ್ಕೆ ಎರಡು ಮುಖ್ಯ ಕಾರಣಗಳಿವೆ, ಮೈಲ್‌ಗಳಲ್ಲಿ ಗೇಜ್ ನಿರ್ವಹಣೆ ಸರಿಯಾಗಿ ಆಗದೇ ಇರುವುದು ಮತ್ತು ಅನಧೀಕೃತ ಪಂಪ್‌ಸೆಟ್‌ಗಳ ಮುಖಾಂತರ ಮೇಲ್ಭಾಗದಲ್ಲಿ ನೀರು ಹರಿಸಿಕೊಳ್ಳುತ್ತಿರುವುದು.
ಜಲಾಶಯದಿಂದ ಮುಖ್ಯ ಕಾಲುವೆಗೆ ಬಿಟ್ಟ ನೀರು ಮೈಲ್ 46ರ ಸನಿಹಕ್ಕೆ ಬರುವ ಹೊತ್ತಿಗೆ ತೀರ ಕಡಿಮೆಯಾಗಿರುತ್ತದೆ. ಈ ಹಿಂದೆ ಮೈಲ್ 69ರಲ್ಲಿ ಗೇಜ್ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ ಮತ್ತು ಹಳೆಯ ಗೇಜ್‌ಗೂ ಮತ್ತು ಈಗ ಸರಿಪಡಿಸಲಾಗಿರುವ ಹೊಸ ಗೇಜ್‌ಗೂ 1.1 ಅಡಿ ವ್ಯತ್ಯಾಸವಿದ್ದು, ಹೊಸ ಗೇಜ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ಅಧಿಕಾರಿಗಳು ಹಳೆಯ ಗೇಜ್‌ನ ಅಳತೆಯನ್ನೇ ವರದಿಯಲ್ಲಿ ದಾಖಲು ಮಾಡುತ್ತಿದ್ದಾರೆ ಎಂಬ ಆರೋಪವು ಇಲಾಖೆಯ ಮೇಲಿದೆ.
ಇದನ್ನೂ ಓದಿ: ತುಂಗಭದ್ರಾ ಎಡದಂಡೆ ಕಾಲುವೆಯ ಅಕ್ರಮ ನೀರಾವರಿ ತಡೆಗೆ ಸಂಬಂಧಿಸಿ ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ ; ರಾಘವೇಂದ್ರ ಕುಷ್ಟಗಿ ಅಸಮಾಧಾನ
ಮೈಲ್ 47ರಲ್ಲಿ 1 ಇಂಚು ನೀರು ಕಡಿಮೆಯಾದಲ್ಲಿ ಮೈಲ್ 104ಕ್ಕೆ ಬರುವಷ್ಟರಲ್ಲಿ 1 ಅಡಿ ನೀರು ಕಡಿಮೆಯಾಗುತ್ತದೆ. ಇದರಿಂದ ನೀರಿನ ನಿರ್ವಹಣೆ ಸರಿಯಾಗಿಲ್ಲ ಆಗುತ್ತಿಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
2013ರಲ್ಲಿ ಕರ್ನಾಟಕ ಇಂಜಿನೀಯರಿಂಗ್ ಸಂಶೋದನಾ ಕೇಂದ್ರ(ಕೆಇಆರ್‌ಸಿ)ದಿಂದ ಅಳತೆಯಾಗಿ, ಗೇಜ್ ಪಾಯಿಂಟ್‌ಗಳಲ್ಲಿ ವ್ಯತ್ಯಾಸವಿರುವ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ವರದಿಯನ್ನು ಸಲ್ಲಿಸಿದ್ದಾರೆ. ಆದರೆ ವ್ಯತ್ಯಾಸವಿರುವ ಗೇಜ್ ಪಾಯಿಂಟ್‌ಗಳನ್ನು ಸರಿಪಡಿಸುವ ಕುರಿತು ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಇದರಿಂದ ಕೊನೆಯ ಭಾಗದ ರೈತರಿಗೆ ನೀರು ಸಿಗದೇ ರೈತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ಬಿಡಲಾಗುವ ನೀರಿನ್ನು ಅಳತೆ ಮಾಡಲು ಒಟ್ಟು 9 ಗೇಜ್ ಪಾಯಿಂಟ್‌ಗಳಿದ್ದಿ, ಮೈಲ್ 10, 19, 24, 36, 46, 60, 69, 90 ಹಾಗೂ 104 ಮೈಲ್‌ಗಳಲ್ಲಿ ಗೇಜ್ ಪಾಯಿಂಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಯಚೂರು ತಾಲೂಕು, ಸಿರವಾರ ಹಾಗೂ ಮಾನ್ವಿ ಭಾಗದಲ್ಲಿ 90 ಹಾಗೂ 104 ಮೈಲ್‌ಗಳು ಕೆಲಸ ಮಾಡುತ್ತಿದ್ದು, ಈ ಗೇಜ್ ಪಾಯಿಂಟ್‌ಗಳಲ್ಲಿಯೇ ಅತಿ ಕಡಿಮೆ ನೀರಿನ ಪ್ರಮಾಣ ಕಂಡು ಬರುತ್ತದೆ. ಈ ಎಲ್ಲ ಗೇಜ್ ಪಾಯಿಂಟ್‌ಗಳು ಡಾಪ್ಲರ್ ಸೆನ್ಸರ್‌ಗಳನ್ನು ಹೊಂದಿವೆ.
ಮೇಲ್ಭಾಗದಲ್ಲಿ ಅನಧೀಕೃತವಾಗಿ ನೀರು ಹರಿಸಿಕೊಳ್ಳುವವರ ಹಿತ ಕಾಪಾಡಲು ಅಧಿಕಾರಿಗಳು ಕೊನೆಯ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. 1.5 ಲಕ್ಷ ಎಕರೆ ಪ್ರದೇಶಕ್ಕೆ ಅನಧೀಕೃತವಾಗಿ ನೀರು ಹರಿಸಲಾಗುತ್ತಿದೆ. ಕೆಇಆರ್‌ಸಿ ವರದಿಯಾನುಸಾರ ಗೇಜ್ ಸರಿಪಡಿಸಬೇಕಾಗಿದೆ. - ಚಾಮರಸ ಮಾಲೀಪಾಟೀಲ್, ಗೌರವಾಧ್ಯಕ್ಷ, ರಾಜ್ಯ ರೈತ ಸಂಘ.