ರಾಯಚೂರು: ರಾಜ್ಯ ಸರ್ಕಾರ ಯಾವುದೇ ಆಯೋಗದ ಶಿಫಾರಸುಗಳಿಲ್ಲದೆ ಏಕಪಕ್ಷೀಯವಾಗಿ ಮೀಸಲು ಪರಿಷ್ಕರಣೆ ಮಾಡಿ, ಬಲಿಷ್ಠ ಸಮುದಾಯಗಳಿಗೆ ಮೀಸಲು ನೀಡುವ ಮೂಲಕ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಪ್ರವರ್ಗ 2ಬಿಯ ಶೇ.4 ಮೀಸಲಾತಿ ರದ್ದುಗೊಳಿಸಿ, ಆರ್ಥಿಕವಾಗಿ, ರಾಜಕೀಯವಾಗಿ ಬಲಿಷ್ಠವಾಗಿರುವ ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ನೀಡಿರುವುದು ಖಂಡನೀಯ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಮಾಡಲಾಗಿದೆ. ಒಬ್ಬರ ಮೀಸಲು ಕಸಿದುಕೊಂಡು ಇನ್ನೊಬ್ಬರಿಗೆ ನೀಡುವಾಗ ಮಾನದಂಡಗಳನ್ನು ಪಾಲನೆ ಮಾಡಿಲ್ಲ ಎಂದು ದೂರಿದರು.
ಹಿರಿಯ ವಕೀಲ ವೈ.ಶ್ರೀಕಾಂತ ಮಾತನಾಡಿ, ಹಿಂದುಳಿದ, ಅತಿ ಹಿಂದುಳಿದ ವರ್ಗಗಳನ್ನು ವರ್ಗೀಕರಿಸಿ ಮಿಲ್ಲರ್ ಆಯೋಗ, ವೆಂಕಟಸ್ವಾಮಿ, ಕಾಂತರಾಜ್ ಹಾಗೂ ಇತರ ಆಯೋಗಗಳು ವರದಿ ನೀಡಿವೆ. ಸರ್ಕಾರ ಆಯೋಗಗಳ ವರದಿ ಪರಿಗಣಿಸದೆ ಮೀಸಲಾತಿ ಹಂಚಿಕೆ ಮಾಡಿದೆ. ಬಲಿಷ್ಠ ಸಮುದಾಯಗಳಿಗೆ 2ಬಿ ಪ್ರವರ್ಗದ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆದರೆ, ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿಲ್ಲ. ಈ ಕುರಿತು ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದರು.