ಜಿಲ್ಲೆ

ರಾಣಿ ಚನ್ನಮ್ಮ ಜಯಂತಿಗೆ ಸಿದ್ಧತೆ ಕೈಗೊಳ್ಳಿ: ಎಡಿಸಿ ಶಿವಾನಂದ

ರಾಯಚೂರು: ಜಿಲ್ಲಾಡಳಿತದ ವತಿಯಿಂದ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅ.23ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಆಚರಿಸಲಾಗುವುದು ಎಂದು ಎಡಿಸಿ ಶಿವಾನಂದ ಭಜಂತ್ರಿ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.

ಜಯಂತಿ ಆಚರಣೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜಯಂತಿಯ ದಿನದಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಜಿಲ್ಲಾ ರಂಗಮಂದಿರದವರೆಗೆ ಭಾವಚಿತ್ರ ಮೆರವಣಿಗೆ ಮಾಡಲಾಗುವುದು. 11.30ಕ್ಕೆ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ವೀರರಾಣಿ ಚನ್ನಮ್ಮ ವರ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗುವುದು. ಜತೆಗೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಶಾಲಾ, ಕಾಲೇಜು, ಕಚೇರಿಗಳಲ್ಲಿ ಕಡ್ಡಾಯವಾಗಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಆಚರಿಸಬೇಕು. ರಂಗಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಡಿ ದತ್ತಪ್ಪ ಸಾಗೂರು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ನಗರಸಭೆ ವ್ಯವಸ್ಥಾಪಕ ರಾಜು, ಪ್ರಮುಖರಾದ ರಂಗಸ್ವಾಮಿ, ದಾನಮ್ಮ ಸೇರಿದಂತೆ ಇತರರಿದ್ದರು.