ಜಿಲ್ಲೆ

ವರುಣಾರ್ಭಟಕ್ಕೆ ನಲುಗಿದ ಮಂದಿ: ಮನೆಗೆ ನುಗ್ಗಿದ ನೀರು

Gangavati - Shashidhara Shashidhara

ರಾಯಚೂರು: ರಾಯಚೂರು ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ನಗರದ ವಿವಿಧೆಡೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಏಕಾಏಕಿ ಸಿಡಿಲು ಗುಡುಗು ಸಹಿತ ಮಳೆ ಆರಂಭವಾಗಿ ಗಂಟೆಗಟ್ಟಲೇ ಸುರಿಯುತ್ತಿದೆ. ಮಳೆಯಿಂದಾಗಿ ರಾಯಚೂರು ನಗರದ ವಿವಿಧ ಬಡಾವಣೆಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಸಿಯಾತಲಾಬ್, ಜಲಾಲ್‌ನಗರ, ಕುಲಸುಂಬಿ ಕಾಲನಿ, ಪೂರ್ಣಿಮಾ ಚಿತ್ರಮಂದಿರದ ಹತ್ತಿರದ ರಸ್ತೆ, ಸೂಪರ್‌ಮಾರ್ಕೇಟ್, ಬಂಗಿಕುಂಟಾ ರಸ್ತೆ, ಲೋಹರ್‌ವಾಡಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಚರಂಡಿಗಳು ತಿಂಬಿ ರಸ್ತೆಯ ಮೇಲೆ ಹರಿಯುತ್ತಿರುವ ನೀರು ಮನೆಗಳಿಗೆ ನುಗ್ಗಿವೆ. ನೀರನ್ನು ಹೊರತೆಗೆಯಲು ಜನರು ಹರಸಾಹಸ ಪಟ್ಟರು.

ಸಿಯಾತಲಾಬ್‌ನಲ್ಲಿ ರಾಜ ಕಾಲುವೆಯಲ್ಲಿ ಹೂಳು ತುಂಬಿರುವ ಕಾರಣ ಮಳೆಯಾದಾಗ ನೀರು ಸರಾವಾಗಿ ಹರಿಯದೇ ರಸ್ತೆಯ ಮೇಲೆ ಹಾಗೂ ಮನೆಗಳ ಒಳಗೆ ನೀರು ನುಗ್ಗುತ್ತವೆ. ಪ್ರತಿ ಬಾರಿಯೂ ಮಳೆಯಾದಾಗ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಳೆ ಬಂದಾಗ ಬಡಾವಣೆಗೆ ಜಿಲ್ಲಾಡಳಿತದ ಹಾಗೂ ನಗರಸಭೆ ಅಧಿಕಾರಿಗಳು ಕೇವಲ ಭೇಟಿ ನೀಡಿ ವೀಕ್ಷಣೆ ಮಾಡಿ ಹೋಗುತ್ತಾರೆ. ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂಬುವುದು ವಿವಿಧ ಬಡಾವಣೆ ನಿವಾಸಿಗಳ ಒತ್ತಾಯವಾಗಿದೆ.