ಜಿಲ್ಲೆ

ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣಪತ್ರ ನೀಡಿ

Raichur

ರಾಯಚೂರಿನಲ್ಲಿ ಪ್ರತಿಭಟನೆ | ಸರ್ಕಾರದಿಂದ ನ್ಯಾಯಾಲಯದ ಆದೇಶ ಪಾಲನೆ ಇಲ್ಲ

ರಾಯಚೂರು: ವೀರಶೈವ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ತಾಲೂಕು ಬೇಡ ಜಂಗಮ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಸಂವಿಧಾನಿಕವಾಗಿ ಅಡಕವಾಗಿರುವಂತೆ ವೀರಶೈವ ಲಿಂಗಾಯತ ಜಂಗಮರೇ ನಿಜವಾದ ಬೇಡ ಜಂಗಮರಾಗಿದ್ದು, ಎಸ್ಸಿ ಪ್ರಮಾಣ ನೀಡುವ ಮೂಲಕ ಸಂವಿಧಾನಿಕ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದರು.

ಬೇಡ ಜಂಗಮರು ಹೊಸದಾಗಿ ಮೀಸಲಾತಿ ನೀಡುವಂತೆ ಕೇಳುತ್ತಿಲ್ಲ. ಹಿಂದಿನಿಂದಲೂ ಎಸ್ಸಿ ಪ್ರಮಾಣ ಪತ್ರ ನೀಡದೆ ಬೇಡ ಜಂಗಮರನ್ನು ವಂಚಿಸುತ್ತಾ ಬರಲಾಗುತ್ತಿದೆ. ನ್ಯಾಯಾಲಯಗಳು ಕೂಡಾ ಪ್ರಮಾಣ ಪತ್ರ ನೀಡುವಂತೆ ಆದೇಶ ಹೊರಡಿಸಿದರೂ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಸತ್ಯಪ್ರತಿಪಾದನಾ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೋರಾಟ ಸ್ಥಳಕ್ಕೆ ಬಂದು ಹುಸಿ ಆಶ್ವಾಸನೆ ಕೊಟ್ಟು ತೆರಳಿದ್ದಾರೆ. ಇದರಿಂದ ಮತ್ತಷ್ಟು ಗೊಂದಲ ಸೃಷ್ಟಿಯಾಗುವಂತಾಗಿದೆ. ಸರ್ಕಾರ ಕೂಡಲೇ ತಹಸೀಲ್ದಾರರರು ಭಯ, ಒತ್ತಡ, ಸೃಜನ ಪಕ್ಷಪಾತ ಮಾಡದೆ ಬೇಡ ಜಂಗಮರಿಗೆ ಎಸ್ಸಿ ಪ್ರಮಾಣಪತ್ರ ವಿತರಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಲಾಯಿತು.