ಜಿಲ್ಲೆ

ಖಾಸಗಿ ಶಾಲೆ ಶಿಕ್ಷಕರಿಗೆ ಪ್ಯಾಕೇಜ್ ಘೋಷಿಸಿ; ಶಿಕ್ಷಣ ಸಂಸ್ಥೆಗಳ ಅಡಳಿತ ಮಂಡಳಿ ಒಕ್ಕೂಟ ಆಗ್ರಹ

ರಾಯಚೂರು: ಖಾಸಗಿ ಅನುದಾನ ರಹಿತ ಶಾಲೆ, ಕಾಲೇಜುಗಳ ಜ್ವಲಂತ ಸಮಸ್ಯೆ ಬಗೆಹರಿಸಬೇಕು. ಖಾಸಗಿ ಶಾಲೆ ಶಿಕ್ಷಕರಿಗೆ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯಿಸಿ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಡಳಿತ ಮಂಡಳಿಯ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಖಾಸಗಿ ಶಾಲೆ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಮೆರವಣಿಗೆ ಮೂಲಕ ಟಿಪ್ಪು ಸುಲ್ತಾನ್ ಉದ್ಯಾನಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರ್‌ಗೆ ಮನವಿ ಸಲ್ಲಿಸಿದರು.

ಶಾಲೆ ಆರಂಭ ಮತ್ತು ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರ ದ್ವಂದ್ವ ಹೇಳಿಕೆಗಳಿಂದ ಪಾಲಕರಲ್ಲಿ ಗೊಂದಲ ಉಂಟಾಗಿದೆ. ಪಾಲಕರು ಶುಲ್ಕ ಪಾವತಿಸದಿರುವುದರಿಂದ ಆಡಳಿತ ಮಂಡಳಿ ಕಟ್ಟಡ ಬಾಡಿಗೆ, ವಾಹನಗಳ ಕಂತು ಕಟ್ಟಲು ಪರದಾಡುವಂತಾಗಿದೆ.

ಕಳೆದ ವರ್ಷದ ಶುಲ್ಕ ಬಾಕಿ ಉಳಿಸಿಕೊಂಡವರು ಹಾಗೂ ಪ್ರಸಕ್ತ ವರ್ಷದ ಶೇ.50ರಷ್ಟು ಶುಲ್ಕ ಡಿಸೆಂಬರ್ ಅಂತ್ಯದೊಳಗೆ ಕಟ್ಟಲು ಆದೇಶಿಸಬೇಕು. ಶಾಲೆ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಹೊರಡಿಸಿರುವ ಅವೈಜ್ಞಾನಿಕ ಸುತ್ತೋಲೆ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.

ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಮಾನ್ವಿ ಕಲ್ಮಠದ ವಿರುಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಒಕ್ಕೂಟದ ಅಧ್ಯಕ್ಷ ಟಿ.ಬಸವರಾಜ, ಪದಾಧಿಕಾರಿಗಳಾದ ಡಿ.ಕೆ.ಮುರಳಿಧರ ಇದ್ದರು.