ಜಿಲ್ಲೆ

ನಿಸ್ವಾರ್ಥ ಸೇವೆ ಮಾಡುವ ಪೊಲೀಸರು: ಡಿಸಿ ನಿತೀಶ

ರಾಯಚೂರು: ಪೊಲೀಸರ ಕೆಲಸ ಅತ್ಯಂತ ಕಷ್ಟಕರವಾದ ಕೆಲಸವಾಗಿದ್ದು, ಜನರ ಸೇವೆ ಮಾಡುವಲ್ಲಿ ಪ್ರಾಣತ್ಯಾಗ ಮಾಡಿದ ಪೊಲೀಸರು ಪ್ರತಿಯೊಬ್ಬರಿಗೂ ಸ್ಪೂರ್ಥಿಯಾಗಿದ್ದಾರೆ ಎಂದು ಡಿಸಿ ಕೆ.ನಿತೀಶ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಮೈದಾನದ ಹುತಾತ್ಮರ ಚಿರಸ್ಮರಣೆ ಸ್ಥಂಭದ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಂಗಳವಾರ ಮಾತನಾಡಿದರು.

ವರ್ಷದ 365 ದಿನಗಳ 24 ಗಂಟೆ ಜನರ ರಕ್ಷಣೆಗಾಗಿ ಪೊಲೀಸರು ಮಳೆ, ಚಳಿ, ಬಿಸಿಲೆನ್ನದೇ ನಿಸ್ವಾರ್ಥ ಸೇವೆ ಮಾಡುತ್ತಾರೆ. ಪೊಲೀಸರಲ್ಲಿ ಸೈನಿಕರಂತೆ ಧೈರ್ಯ, ವಕೀಲರಂತೆ ನ್ಯಾಯಯುತವಾದ ಮಾತುಗಳು, ವೈದ್ಯರಂತೆ ಪ್ರಥಮ ಚಿಕಿತ್ಸೆ ನೀಡುವ ಗುಣ ಹಾಗೂ ಶಿಕ್ಷಕರಂತೆ ಜನರಿಗೆ ನಿಯಮಗಳ ಕುರಿತು ಶಿಕ್ಷಣ ನೀಡುವ ಮನೋಭಾವವನ್ನು ಕಾಣಬಹುದಾಗಿದೆ ಎಂದರು.

ಸೈನಿಕರು ಗಡಿಯಲ್ಲಿ ದೇಶ ಸೇವೆ ಮಾಡುತ್ತಾರೆ. ಗಡಿಯ ಒಳಗೆ ಆಂತರಿಕ ಶತ್ರುಗಳನ್ನು ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಜನರ ರಕ್ಷಣೆಗಾಗಿ ಪೊಲೀಸರೂ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಹಾಗೂ ಅವರ ಕುಟುಂಬಗಳಿಗೆ ಎಲ್ಲ ರೀತಿಯ ಸೌಲಭ್ಯ ಸಿಗಬೇಕಾಗಿದೆ ಎಂದರು.

ಪ್ರತಿಯೊಬ್ಬರು ಪೊಲೀಸರ ಕಾರ್ಯವೈಕರಿಯನ್ನು ಶ್ಲಾಘಿಸಿ ಪ್ರೇರೇಪಿಸಬೇಕು. ರಾಯಚೂರು ಜಿಲ್ಲೆಯ ಪೊಲೀಸರಿಗೆ ಹೆಚ್ಚಿನ ಒತ್ತಡವಿರುತ್ತದೆ. ಕಾಲುವೆಗಳ ಮೇಲೆ ಕಾವಲು, ಮರಳು ಸಾಗಾಣಿಕೆ ತಡೆ ಸೇರಿದಂತೆ ಅನೇಕ ಸವಾಲುಗಳನ್ನು ಇಲ್ಲಿನ ಪೊಲೀಸರು ಎದುರಿಸುತ್ತಾರೆ. ಜಿಲ್ಲೆಯ ಪೊಲೀಸರಿಗೆ ಜವಾಬ್ದಾರಿ ಅತಿ ಹೆಚ್ಚಿದೆ. ಈ ಎಲ್ಲ ಒತ್ತಡಗಳ ಮಧ್ಯೆಯೂ ಠಾಣೆಗೆ ಆಗಮಿಸುವ ಸಾರ್ವಜನಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

ಇದೇ ವೇಳೆ ಎಸ್ಪಿ ಎಂ.ಪುಟ್ಟಮಾದಯ್ಯ ಮಾತನಾಡಿ, 2023ರ ಸೆ.1ರಿಂದ ಈವರೆಗೆ ಇಡೀ ದೇಶದಲ್ಲಿ 216ಜನ ಪೊಲೀಸರು ಸಾವನಪ್ಪಿದ್ದು, ಅದರಲ್ಲಿ ಕರ್ನಾಟಕ ರಾಜ್ಯದ 12 ಜನ ಕರ್ತವ್ಯದಲ್ಲಿರುವಾಗ ಹುತಾತ್ಮರಾಗಿದ್ದಾರೆ. ರಾಯಚೂರು ಜಿಲ್ಲೆಯ ತುರ್ವಿಹಾಳ ಪೊಲೀಸ್ ಠಾಣೆಯ ಎಎಸ್‌ಐ ಜಗದೀಶ ಎನ್ನುವವರು ಕೂಡ ಈ ವರ್ಷ ಹುತಾತ್ಮರಾಗಿದ್ದಾರೆ ಎಂದು ತಿಳಿಸಿ. ಹುತಾತ್ಮರಾದ ಎಲ್ಲ ಪೊಲೀಸರ ಹೆಸರುಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಹುತಾತ್ಮರ ಚಿರಸ್ಮರಣೆ ಸ್ಥಂಭಕ್ಕೆ ಅಧಿಕಾರಿಗಳು ಹಾಗೂ ಜಿಲ್ಲೆಯ ಗಣ್ಯರು ಹೂಗುಚ್ಚ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಪೊಲೀಸ್ ವಾದ್ಯ ವೃಂಧದಿಂದ ಸಂಗೀತ ಹಾಗೂ ಹುತಾತ್ಮ ಗೌರವ ನಮನ ಪಡೆಯಿಂದ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಎಸ್ಪಿಗಳಾದ ಡಾ.ಆರ್.ಶಿವಕುಮಾರ, ಜಿ.ಹರೀಶ್ ಸೇರಿದಂತೆ ತರರು ಉಪಸ್ಥಿತರಿದ್ದರು.