ರಾಯಚೂರು: ಶ್ರೀಶೈಲ ಪಾದಯಾತ್ರಿಗಳು ಅನುಭವಿಸುವ ಕಷ್ಟಗಳನ್ನು ಅರಿತು ಅವುಗಳನ್ನು ದೂರಗೊಳಿಸಬೇಕು ನಿಟ್ಟಿನಲ್ಲಿ ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜ ಮತ್ತು ವೀರಶೈವ ಲಿಂಗಾಯತ ಮಹಾಸಭಾ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮಹೋತ್ಸವ, ಜನ್ಮ ಸುವರ್ಣಮಹೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಜನ ಜಾಗೃತಿ ಪಾದಯಾತ್ರೆ ಕುರಿತು ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಭಕ್ತರು ಪಾದಯಾತ್ರೆ ಮೂಲಕ ಮಲ್ಲಿಕಾರ್ಜುನಸ್ವಾಮಿಗೆ ಭಕ್ತಿ ಸಮರ್ಪಣೆ ಮಾಡುತ್ತಾರೆ. ಪಾದಯಾತ್ರೆ ಸಂದರ್ಭದಲ್ಲಿ ಭಕ್ತರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಅವುಗಳನ್ನು ಅರಿತುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಪಾದಯಾತ್ರೆ ಜತೆಗೆ ಧರ್ಮ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಲಾಗುವುದು.
ಮೂರು ತಿಂಗಳ ಕಾಲ ನಡೆಯುವ ಪಾದಯಾತ್ರೆ ಸಂದರ್ಭ ಗ್ರಾಮಗಳಲ್ಲಿ ಸಭೆ, ಲಿಂಗದೀಕ್ಷೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜಾತಿ, ಧರ್ಮ ಬೇಧವಿಲ್ಲದೆ ಲಿಂಗ ದೀಕ್ಷೆ ನೀಡಲಾಗುತ್ತಿದ್ದು, ನಿಯಮಗಳನ್ನು ಪಾಲಿಸುವವರಿಗೆ ದೀಕ್ಷೆ ನೀಡಲಾಗುವುದು. ಶ್ರೀಶೈಲದಲ್ಲಿ ಜನಪಯೋಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, 500 ಕೊಠಡಿಗಳ ವಸತಿಗೃಹ ಹಾಗೂ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದರಿಂದ ಕರ್ನಾಟಕದಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗಲಿದೆ ಎಂದು ಜಗದ್ಗುರುಗಳು ತಿಳಿಸಿದರು.
ಬಿಚ್ಚಾಲಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರುಗಳ ಸಂಕಲ್ಪದಂತೆ ಕಾರ್ಯಕ್ರಮವನ್ನು ನಡೆಸಲಾಗುವುದು. ಮಹತ್ವದ ಕಾರ್ಯದಲ್ಲಿ ಜಿಲ್ಲೆಯ ಎಲ್ಲ ಭಕ್ತರು ಭಾಗವಹಿಸಬೇಕು ಎಂದರು.
ಶಹಾಪುರ ಹಿರೇಮಠದ ಸೂಗೂರೇಶ್ವರ ಸ್ವಾಮೀಜಿ ಮಾತನಾಡಿ, ಯಡಿಯೂರಿನಿಂದ ಅ.29ರಂದು ಜಗದ್ಗುರುಗಳ ಪಾದಯಾತ್ರೆ ಆರಂಭವಾಗಲಿದೆ. ವಿವಿಧ ಜಿಲ್ಲೆಗಳ ಮೂಲಕ ಸಂಚರಿಸಿ 2023ರ ಜ.10ರಂದು ಶ್ರೀಶೈಲಕ್ಕೆ ತಲುಪಲಿದ್ದು, ನಾಲ್ಕು ದಿನಗಳ ಕಾಲ ಶ್ರೀಶೈಲದಲ್ಲಿ ಪೀಠಾರೋಹಣ ಮಹೋತ್ಸವ, ಜನ್ಮ ಸುವರ್ಣಮಹೋತ್ಸವ ಕಾರ್ಯಕ್ರಮ ನಡೆಯಲಿವೆ.
ಪಾದಯಾತ್ರೆ ನ.17ರಂದು ರಾಯಚೂರು ನಗರಕ್ಕೆ ಆಗಮಿಸಿ ನ.18ರಂದು ಬೆಳಗ್ಗೆ 10 ಸಾವಿರ ಜನರಿಗೆ ಲಿಂಗದೀಕ್ಷೆ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 3ಕ್ಕೆ ನಗರದಿಂದ ನಿರ್ಗಮನವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಸ್ವಾಮೀಜಿ, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಸ್ವಾಮೀಜಿ, ಸುಲ್ತಾನಪುರದ ಸೋಮನಾಥ ಸ್ವಾಮೀಜಿ, ಮಂಗಳವಾರ ಹಿರೇಮಠದ ವೀರಸಂಗಮೇಶ್ವರ ದೇವರು, ಶಾಸಕ ಡಾ.ಶಿವರಾಜ ಪಾಟೀಲ್, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಂ.ವೀರನಗೌಡ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.