ಜಿಲ್ಲೆ

ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಕಮಿಷನ್ ದಂಧೆ: ನಾಗಪ್ಪ ಗಿರಿಣಿ ಆರೋಪ

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಪರವಾನಿಗೆ ಪಡೆದ ಗುತ್ತಿಗೆದಾರರಿಗೆ ಕಾಮಗಾರಿಗಳ ಗುತ್ತಿಗೆ ನೀಡದೇ ಸರ್ಕಾರಿ ಸಂಸ್ಥೆಗಳಿಗೆ ನೀಡುತ್ತಾ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ನಾಗಪ್ಪ ಗಿರಿಣಿ ಆಪಾದಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಸರ್ಕಾರದ ಅಧೀನದಲ್ಲಿ ಬರುವಂತಹ ಕ್ಯಾಷುಟೆಕ್, ನಿರ್ಮಿತಿ ಕೇಂದ್ರ ಹಾಗೂ ಕೆಆರ್‌ಐಡಿಎಲ್ ಸಂಸ್ಥೆಗಳಿಗೆ ಕಾಮಗಾರಿಗಳನ್ನು ನೀಡಲಾಗುತ್ತಿದೆ. ಇದರಿಂದ ಈ ಭಾಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದ್ದು, ಜಿಲ್ಲೆಯ ಬಹುತೇಕ ಸರ್ಕಾರಿ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡದೇ ಅನುಭವ ಹಾಗೂ ಮಾನವ ಸಂಪನ್ಮೂಲ ಹಾಗೂ ಅಗತ್ಯ ಎಂಜಿನಿಯರ್ ಇಲ್ಲದಂತಹ ಕ್ಯಾಷುಟೆಕ್, ನಿರ್ಮಿತಿ ಕೇಂದ್ರಕ್ಕೆ ನೀಡಲಾಗುತ್ತಿದೆ ಎಂದು ದೂರಿದರು.

ಟೆಂಡರ್ ನಿಯಮ ಪಾಲಿಸದೇ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಕಮಿಷನ್ ದಂಧೆ ನಡೆಸುತ್ತಿದ್ದಾರೆ. ಕೆಕೆಆರ್‌ಡಿಬಿ ಅನುದಾನ ಹಂಚಿಕೆಯಲ್ಲಿಯೂ ತಾರತಮ್ಯವಾಗುತ್ತಿದೆ. ಕ್ಯಾಷುಟೆಕ್, ನಿರ್ಮಿತಿ ಕೇಂದ್ರಗಳಿಗೆ ಶೇ.70ರಷ್ಟು ಕಾಮಗಾರಿ ನೀಡುತ್ತಿರುವುದರಿಂದ ಖಾಸಗಿ ಗುತ್ತಿಗೆದಾರರು ಸಂಕಷ್ಟ ಎದುರಿಸುವಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕೆಕೆಆರ್‌ಡಿಬಿ ಅನುದಾನ ಸ್ಥಳೀಯ ಗುತ್ತಿಗೆದಾರರಿಗೆ ನೀಡುವಂತೆ, ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಲಾಗುವುದು. ಜತೆಗೆ ಶೀಘ್ರವೇ ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು
ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬಸಪ್ಪ ಕಂದಗಲ್, ಡಿ.ರವಿಂದ್ರ ನಾಯಕ, ಬಿ.ಮಲ್ಲಿ ಕಾರ್ಜುನ, ಸಂಗಮೇಶ ಅವಳಿ, ವೀರಯ್ಯಸ್ವಾಮಿ, ಆಂಜನೇಯ, ಅಶೋಕ ಸೇರಿದಂತೆ ಇತರರಿದ್ದರು.