ಜಿಲ್ಲೆ

ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ತಾ.ಪಂ. ಎಫ್‌ಡಿಎ ಸೇವೆಯಿಂದ ಅಮಾನತು

ರಾಯಚೂರು: ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಿಂಧನೂರು ತಾಪಂ ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕ ಚಂದ್ರಶೇಖರ ಹಿರೇಮಠರನ್ನು ಸೇವೆಯಿಂದ ಅಮಾತುಗೊಳಿಸಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಬುಧವಾರ ಆದೇಶ ಹೊರಡಿಸಿದ್ದಾರೆ.

ಸಿಂಧನೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರ ಸಭೆಯಲ್ಲಿ ಚಂದ್ರಶೇಖರ ಹಿರೇಮಠ ಭಾಗವಹಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಲಿಂಗಸುಗೂರಿನ ಸಹಾಯಕ ಆಯುಕ್ತ ವಿಚಾರಣೆ ನಡೆಸಿ ರಾಜಕೀಯ ಪಕ್ಷದ ಮುಖಂಡರೊಂದಿಗೆ ವೇದಿಕೆ ಹಂಚಿಕೆಗೊಂಡಿರುವುದು ಸಾಬೀತಾಗಿರುವುದರಿಂದ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು.

ಪ್ರಜಾ ಪ್ರತಿನಿಧಿ ಕಾಯ್ದೆ 1951ರಡಿ ಚುನಾವಣೆ ಕರ್ತವ್ಯ ಲೋಪ ಆರೋಪದಡಿ ಚಂದ್ರಶೇಖರ ಹಿರೇಮಠರನ್ನು ಸೇವೆಯಿಂದ ಅಮಾನತುಗೊಳಿಸಿ, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಆರ್.ವೆಂಕಟೇಶ ಕುಮಾರ ಸೂಚಿಸಿದ್ದಾರೆ.