ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕ ಡಾ.ಬಸವಪ್ರಸಾದ ಬರೆದ ‘ಡಿಜಿಟಲ್ ಫ್ಲೂಯೆನ್ಸಿ’ ಪುಸ್ತಕವನ್ನು ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಶುಕ್ರವಾರ ಬಿಡುಗಡೆ ಮಾಡಿದರು. 
ಜಿಲ್ಲೆ

ಎನ್‌ಇಪಿಯಿಂದ ಹೊಸ ದಿಕ್ಕಿನ ಪಯಣ - ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಅಭಿಪ್ರಾಯ

ರಾಯಚೂರು: ಹಳೆಯ ಶಿಕ್ಷಣ ಪದ್ಧತಿಗೆ ಹೋಲಿಸಿದಲ್ಲಿ ಹೊಸ ಶಿಕ್ಷಣ ನೀತಿ ನಮ್ಮನ್ನು ಹೊಸ ದಿಕ್ಕಿನತ್ತ ಕರೆದುಕೊಂಡು ಹೋಗುತ್ತಿದೆ. ಹೊಸ ನೀತಿಯಲ್ಲಿ ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕ ಡಾ.ಬಸವಪ್ರಸಾದ ಬರೆದ ‘ಡಿಜಿಟಲ್ ಫ್ಲೂೃಯೆನ್ಸಿ’ ಪುಸ್ತಕವನ್ನು ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿದರು. ಹೊಸ ಶಿಕ್ಷಣ ನೀತಿಗೆ ಇಂತಹ ಪುಸ್ತಕಗಳು ತುಂಬಾ ಸಹಕಾರಿಯಾಗಲಿವೆ. ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಬೇಕು. ಹೊಸ ಆಲೋಚನೆಗಳು ಮತ್ತು ಪ್ರಯೋಗಗಳು ನಮ್ಮನ್ನು ಜೀವನದಲ್ಲಿ ಎತ್ತರಕ್ಕೆ ಬೆಳೆಸುತ್ತವೆ. ಇಂತಹ ಪುಸ್ತಕಗಳು ಶಿಕ್ಷಣ ಕ್ಷೇತ್ರವನ್ನು ಆಧುನೀಕರಿಸಲು ಅನುಕೂಲವಾಗುತ್ತವೆ ಎಂದು ತಿಳಿಸಿದರು.

ಲೇಖಕ ಡಾ.ಬಸವಪ್ರಸಾದ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಎಲ್ಲವೂ ಡಿಜಿಟಲೀಕರಣವಾಗುತ್ತಿರುವ ಸಂದರ್ಭದಲ್ಲಿ ಡಿಜಿಟಲೀಕರಣದ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿ ಪುಸ್ತಕವನ್ನು ಹೊರತರಲಾಗಿದೆ ಎಂದು ಹೇಳಿದರು.

ಲೇಖಕರ ತಂದೆ ಮಲ್ಲಿಕಾರ್ಜುನ ಬೆಂಚಮರಡಿಮಠ ಹಾಗೂ ತಾಯಿ ಗೌರಮ್ಮರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಪ್ರಾಚಾರ್ಯ ಡಾ.ಯಂಕಣ್ಣ, ಪ್ರಾಧ್ಯಾಪಕ ಡಾ.ರವಿ, ಮುಖಂಡರಾದ ಚನ್ನನಗೌಡ ಪಾಟೀಲ್, ಎ.ಎಸ್.ಪಾಟೀಲ್, ಪ್ರಭು ಶಾಸ್ತ್ರಿ ಉಪಸ್ಥಿತರಿದ್ದರು.