ರಾಯಚೂರು: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಕಲಂ 371 (ಜೆ) ಕಾಯ್ದೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಿರುವ ನವೋದಯ ಶಿಕ್ಷಣ ಸಂಸ್ಥೆ ತನ್ನ ಅರ್ಜಿಯನ್ನು ಹಿಂಪಡೆಯದಿದ್ದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಡಾ.ಶಿವರಾಜ ಪಾಟೀಲ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭಾಷಾ ಅಲ್ಪ ಸಂಖ್ಯಾತರ ಹೆಸರಿನಲ್ಲಿ ವೈದ್ಯಕೀಯ ಕಾಲೇಜಿಗೆ ಅನುಮತಿ ಪಡೆದಿರುವ ನವೋದಯ ಶಿಕ್ಷಣ ಸಂಸ್ಥೆ, ಈ ಭಾಗದ ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ಮೀಸಲಾತಿ ನೀಡದೆ ಹೈಕೋರ್ಟ್‌ಗೆ ಮೊರೆ ಹೋಗಿರುವುದು ಈ ಭಾಗಕ್ಕೆ ಮಾಡಿದ ಅನ್ಯಾಯವಾಗಿದೆ. ಇಲ್ಲಿನ ಸವಲತ್ತುಗಳನ್ನು ಪಡೆದುಕೊಂಡು ಸ್ನಾತಕ ಮತ್ತು ಸ್ನಾತಕೋತ್ತರ ಸೇರಿದಂತೆ 106 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಲು ನವೋದಯ ಶಿಕ್ಷಣ ಸಂಸ್ಥೆ ಕಾರಣವಾಗಿದೆ. ಶಿಕ್ಷಣ ಸಂಸ್ಥೆ 371 (ಜೆ) ಕಾಯ್ದೆಗೆ ಧಕ್ಕೆ ತರುವ ಪ್ರಯತ್ನಕ್ಕೆ ಕೈಹಾಕಿರುವುದು ಕಳವಳಕಾರಿಯಾಗಿದೆ ಎಂದರು.
ಈ ನೆಲದ ಕಾನೂನು ಪಾಲಿಸದೆ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮೀಸಲು ನೀಡಲು ವಿರೋಧ ವ್ಯಕ್ತಪಡಿಸುತ್ತಿದೆ. ಭಾಷಾ ಅಲ್ಪಸಂಖ್ಯಾತ ಸಂಸ್ಥೆಯಾಗಿದ್ದರೂ 371 (ಜೆ) ಅನ್ವಯ ಮೀಸಲು ನೀಡಬೇಕು. ಕಾನೂನುಗಳು ಈ ಸಂಸ್ಥೆಗೂ ಅನ್ವಯವಾಗುತ್ತವೆ. ನವೋದಯ ಸಂಸ್ಥೆಯ ನಡೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 800ಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ಸ್ಥಳೀಯರಿಗೆ ಅಲಭ್ಯವಾಗಬಹುದು ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ, ಕಡಿಮೆ ಬೆಲೆಯಲ್ಲಿ ಭೂಮಿ, ನೀರು ಹಾಗೂ ಇತತ ಸೌಕರ್ಯ ಪಡೆದು ಇಲ್ಲಿಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿರಾಕರಿಸುತ್ತಿರುವುದು ಅನ್ಯಾಯವಾಗಿದೆ. ಕೂಡಲೇ ಅರ್ಜಿಯನ್ನು ಹಿಂಪಡೆಯದಿದ್ದರೆ ನವೋದಯ ಶಿಕ್ಷಣ ಸಂಸ್ಥೆಗೆ ಮುತ್ತಿಗೆ ಹಾಕಲಾಗುವುದು ಎಂದರು. ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ಸ್ಥಳೀಯರ ಸಹಕಾರದಿಂದ ಅಭಿವೃದ್ಧಿ ಹೊಂದಿರುವ ಸಂಸ್ಥೆ ಇಲ್ಲಿಯ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದರೆ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ಕೆಪಿಸಿಸಿ ವಕ್ತಾರ ಎ.ವಸಂತಕುಮಾರ, ಆರ್‌ಡಿಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಮಾಜಿ ಅಧ್ಯಕ್ಷ ವೈ.ಗೋಪಾಲರೆಡ್ಡಿ, ನಗರಸಭೆ ಸದಸ್ಯ ಜಯಣ್ಣ, ತಾರಾನಾಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಾಗರಾಜ ಮಸ್ಕಿ, ಮುಖಂಡರಾದ ವೈ.ನರಸಪ್ಪ, ಜೆ.ಬಿ.ರಾಜು, ರವೀಂದ್ರನಾಥ ಪಟ್ಟಿ, ಶಿವಕುಮಾರ ಯಾದವ, ರವೀಂದ್ರ ಜಲ್ದಾರ ಇದ್ದರು.