ರಾಯಚೂರು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಕೂಡ್ಲೂರು ಗ್ರಾಮದ ಸರ್ಕಾರಿ ಗೈರಾಣಿ ಜಮೀನಿನಲ್ಲಿ ಅನಧಿಕೃತವಾಗಿ ಮರಂ ಸಾಗಣೆ ಮಾಡುತ್ತಿರುವುದರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಜಾನುವಾರುಗಳಿಗಾಗಿ ಕಾಯ್ದಿರಿಸಿದ ಮೂರೂವರೆ ಎಕರೆ ಜಮೀನಿದ್ದು, ಅದರಲ್ಲಿ ಸಾರ್ವಜನಿಕ ರಸ್ತೆಯಿದೆ. ಹೆದ್ದಾರಿ ಕಾಮಗಾರಿಗಾಗಿ ರಸ್ತೆಯ ಜಾಗವನ್ನು ಬಿಡದೆ ಮರಂ ತೆಗೆಯುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ ಎಂದು ದೂರಿದರು.
ರಸ್ತೆಯನ್ನು ಬಂದ್ ಮಾಡಿ ಮರಂ ತೆಗೆಯುತ್ತಿರುವುದರಿಂದ ಸಗಮಕುಂಟಾ, ಕಾಡ್ಲೂರು ಗ್ರಾಮಗಳಿಗೆ ತೆರಳಲು ಸಂಪರ್ಕ ಇಲ್ಲದಂತಾಗಿದೆ. ಹೆದ್ದಾರಿ ಕಾಮಗಾರಿಗಾಗಿ ಜಮೀನಿನಲ್ಲಿ ಬೆಳೆಯಲಾಗಿರುವ ಜೋಳ ಮತ್ತು ಅಜ್ವಾನಾ ಬೆಳೆಗಳನ್ನು ನಾಶಪಡಿಸಲು ಮುಂದಾಗಿದ್ದು, ಇದರಿಂದ ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ. ಫಸಲು ಇನ್ನೂ 20 ದಿನಗಳಲ್ಲಿ ಕಟಾವಿಗೆ ಬರಲಿದ್ದು, ಅಲ್ಲಿಯವರೆಗೆ ಸಮಯಾವಕಾಶ ನೀಡಲು ಮನವಿ ಮಾಡಿದರೂ ಗುತ್ತಿಗೆದಾರರು ಸ್ಪಂದಿಸುತ್ತಿಲ್ಲ.
ಹೆದ್ದಾರಿಗಾಗಿ ರೈತರು ಕಡಿಮೆ ಬೆಲೆಯಲ್ಲಿ ಜಮೀನು ನೀಡಿದ್ದು, ಈಗ ಬೆಳೆ ಹಾನಿ ಮಾಡಿದಲ್ಲಿ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಕಾರಣ ಬೆಳೆ ಕಟಾವು ಮಾಡುವವರೆಗೆ ಕಾಮಗಾರಿ ನಿಲ್ಲಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಗ್ರಾಮಸ್ಥರಾದ ರಂಗಣ್ಣ, ನಾಗರಾಜ, ಭೀಮೇಶ, ವೀರೇಶ, ಮಹೆಬೂಬ್, ಲಕ್ಷ್ಮಣ, ನಾಗೇಶಪ್ಪ, ರಾಮನಗೌಡ ಇದ್ದರು.