ರಾಯಚೂರು: ರಾಯಚೂರು ಜಿಲ್ಲೆಯ ಎರಡು ನಗರಸಭೆಗಳು, ಒಂದು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯತಿಯಲ್ಲಿ ತೆರವಾದ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಶನಿವಾರ ಜಿಲ್ಲೆಯಲ್ಲಿ ಶಾಂತಿಯುತವಾಗಿ ಹಾಗೂ ಮಂದಗತಿಯಲ್ಲಿ ಜರುಗಿತು.
ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಯಿತು. ರಾಯಚೂರು ನಗರಸಭೆಯ 31ನೇ ವಾರ್ಡ್‌ನಲ್ಲಿ 5301 ಮತದಾರರಿದ್ದು, 2602 ಪುರುಷರು ಹಾಗೂ 2699 ಮಹಿಳಾ ಮತದಾರಿದ್ದಾರೆ.
ಸಿಂಧನೂರಿನ ವಾರ್ಡ್ ನಂ.6ರಲ್ಲಿ 1033 ಪುರುಷ, 1075 ಮಹಿಳಾ ಮತದಾರರಿದ್ದಾರೆ. ಮಸ್ಕಿ ಪುರಸಭೆಯ 3ನೇ ವಾರ್ಡ್‌ನಲ್ಲಿ 445 ಪುರುಷ, 509 ಮಹಿಳಾ ಮತದಾರರು ಹಾಗೂ ಹಟ್ಟಿ ಪಟ್ಟಣ ಪಂಚಾಯತಿಯ 6ನೇ ವಾಡ್‌ನಲ್ಲಿ 735 ಪುರುಷ, 770 ಮಹಿಳಾ ಮತದಾರರಿದ್ದಾರೆ. ವಾರ್ಡ್ ನಂ.8ರಲ್ಲಿ 238 ಪುರುಷರು 284 ಮಹಿಳಾ ಮತದಾರರಿದ್ದಾರೆ.
ಸಂಜೆ 5 ಗಂಟೆಯ ವೇಳೆಗೆ ರಾಯಚೂರು ನಗರಸಭೆಯ 6 ಮತಗಟ್ಟೆಗಳಲ್ಲಿ ಶೇ.42.90, ಸಿಂಧನೂರಿನಲ್ಲಿ ಶೇ.61.19, ಮಸ್ಕಿಯಲ್ಲಿ ಶೇ.68.03 ಹಾಗೂ ಹಟ್ಟಿಯ 6ನೇ ವಾರ್ಡ್‌ನಲ್ಲಿ ಶೇ.61 ಹಾಗೂ 8ನೇ ವಾರ್ಡ್‌ನಲ್ಲಿ ಶೇ.64.37 ರಷ್ಟು ಮತದಾನವಾಗಿದೆ.
ರಾಯಚೂರು ನಗರಸಭೆ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಗಿರಿಜಾ ರಾಘವೇಂದ್ರ ಸ್ಪರ್ಧಿಸಿದ್ದು, ಕಾಂಗ್ರೆಸ್‌ನಿಂದ ಅಂಜಿನಮ್ಮ ಶಾಮಸುಂದರ ಸ್ಪರ್ಧೆ ಮಾಡಿದ್ದಾರೆ. ಈ ಹಿಂದೆ ರಾಯಚೂರು ನಗರಸಭೆಯ ಸದಸ್ಯ ಸ್ಥಾನಕ್ಕೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೇಣುಕಾ ಭಿಮರಾಯ ಸದಸ್ಯತ್ವ ಅನರ್ಹಗೊಂಡ ಕಾರಣ ಇಲ್ಲಿಯ ಸ್ಥಾನ ತೆರವಾಗಿತ್ತು.
ಜಿಲ್ಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 5467 ಮತದಾರರು ಮತದಾನ ಮಾಡಿದ್ದಾರೆ. ರಾಯಚೂರು ನಗರದಲ್ಲಿ 1114 ಪುರುಷರು, 1150 ಮಹಿಳೆಯರು ಸೇರಿ ಒಟ್ಟು 2274 ಮತದಾರರು ಮತದಾನ ಮಾಡಿದ್ದಾರೆ. ಸಿಂಧನೂರು ನಗರದಲ್ಲಿ 664 ಪುರುಷರು ಹಾಗೂ 626 ಮಹಿಳೆಯರು, ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ 320 ಪುರುಷರು ಹಾಗೂ 329 ಹಿಳೆಯರು ಮತದಾನ ಮಾಡಿದ್ದಾರೆ. ಹಟ್ಟಿ ಪಟ್ಟಣದಲ್ಲಿ 6ನೇ ವಾರ್ಡ್‌ನಲ್ಲಿ 529 ಪುರುಷರು ಹಾಗೂ 389, 8ನೇ ವಾರ್ಡ್‌ನಲ್ಲಿ 161 ಪುರುಷ ಹಾಗೂ 175 ಮಹಿಳಾ ಮನತದಾರರು ಮತದಾನ ಮಾಡಿದ್ದಾರೆ.