ಜಿಲ್ಲೆ

ಉಪ್ಪು ತಿಂದವರು ನೀರು ಕುಡಿಯಲೇ ಬೇಕು: ವಿ.ಸೋಮಣ್ಣ

ರಾಯಚೂರು: ಮುಡಾ ಹಗರಣ ಅಷ್ಟು ಸಾಮಾನ್ಯವಾದ ಹಗರಣವಲ್ಲ, ವಿಚಾರಣೆ ಹಂತದಲ್ಲಿರುವ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

ರಾಯಚೂರು ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಮುಡಾ ಹಗರಣದಲ್ಲಿ ಇನ್ನೂ ಹೆಚ್ಚಿನ ವಿಚಾರಣೆ ನಡೆಯಬೇಕಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ವ್ಯಂಗ್ಯವಾಡಿದರು.

45 ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯ ಒಬ್ಬ ಮುತ್ಸದ್ಧಿ ರಾಜಕಾರಣಿ ಅವರ ವಿರುದ್ಧ ಮುಡಾ ಹಗರಣದ ಕೂಗು ಕೇಳಿ ಬರುತ್ತಿದ್ದು, ಪರಿಸ್ಥಿತಿ ಕುದಿಯುತ್ತಿದೆ. ತನಿಖೆ ಮುಂದುವರೆದಿದೆ ತನಿಖೆಯ ನಂತರ ಎಲ್ಲವೂ ತಿಳಿಯಲಿದೆ ಎಂದರು.

ಮುಡಾ ಹಘರಣದಲ್ಲಿ ಸಿದ್ದರಾಮಯ್ಯ ಪಾತ್ರ ಇದೆಯೋ ಇಲ್ಲವೋ ಎಂಬುವುದು ನಾವು ಹೇಳುವುದು ಸರಿಯಲ್ಲ ಪ್ರಕರಣದ ವಿಚಾರಣೆ ಎದುರಿಸಲಿ ಮತ್ತೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದರು. ‌ರಾಜ್ಯಪಾಲರಿಗೆ ಭಯ ಶುರುವಾಗಿದೆ ಎನ್ನುವುದು ಸರಿಯಲ್ಲ ರಾಜಪಾಲರ ಹುದ್ದೆ ಗೌರವಯುತವಾದ ಹುದ್ದೆಯಾಗಿದ್ದು, ಕಾನೂನು ಸಂರಕ್ಷಣೆ ಮಾಡಿದ್ದಾರೆ. ರಾಜ್ಯಪಾಲರ ತೀರ್ಮಾನ ಸರಿಯಾಗಿದೆ ಎಂದು ಹೇಳಿದರು.

ರಾಯಚೂರು ರೈಲು ನಿಲ್ದಾಣದಲ್ಲಿ ಲಿಫ್ಟ್ , ಎಸ್ಕೂೃಲೇಟರ್, ವಿಶ್ರಾಂತಿ ಕೊಠಡಿಗಳನ್ನು ಸ್ಥಾಪನೆ ಮಾಡುವ ಮೂಲಕ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣದ ಮಾದರಿಯ ವ್ಯವಸ್ಥೆಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ರಾಯಚೂರು ರೈಲು ನಿಲ್ದಾಣದ ಅಭಿವೃದ್ಧಿಗೆ ಮೊದಲನೇ ಹಂತದಲ್ಲಿ 11 ಕೋಟಿ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ನಿಲ್ದಾಣದ ಅಭಿವೃದ್ಧಿಗೆ ನೂರು ಕೋಟಿ ಹಣವನ್ನು ಖರ್ಚು ಮಾಡಲಾಗುವುದು. 257 ಕಿ,ಮೀ ಗದಗ- ವಾಡಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ 2013-14ರಲ್ಲಿ ಅನುಮೋದನೆ ಸಿಕ್ಕಿದ್ದು, 2842 ಕೋಟಿ ರೂ.ಗಳು ಮಂಜೂರಾಗಿದ್ದು, 2024ರ ಮಾರ್ಚ್ ತಿಂಗಳವರೆಗೆ 1027 ಕೋಟಿ ರೂ,.ಗಳನ್ನು ಖರ್ಚು ಮಾಡಲಾಗಿದ್ದು, 2026-27ರೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಮಾಜಿ ಶಾಸಕ ಕೆ.ಶಿವನಗೌಡ ನಾಯಕ, ಬಸನಗೌಡ ಬಲ್ಲಟಗಿ ಸೇರಿದಂತೆ ಇತರರಿದ್ದರು.