ಬಾಬುರಾವ್ ಶೇಗುಣಸಿ 
ಜಿಲ್ಲೆ

ಆ.29ಕ್ಕೆ ಸಂಸದ ಕುಮಾರ್ ನಾಯಕಗೆ ಅಭಿನಂದನಾ ಸಮಾರಂಭ: ಬಾಬುರಾವ್

ರಾಯಚೂರು: ಎಸ್‌ಕೆಇ ಪ್ಯಾರಾಮೆಡಿಕಲ್ ಕಾಲೇಜು ವತಿಯಿಂದ ನೂತನ ಸಂಸದರಾಗಿ ಆಯ್ಕೆಯಾದ ಜಿ.ಕುಮಾರ ನಾಯಕ ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ಪ್ರಾಚಾರ್ಯ ಡಾ.ಬಾಬುರಾವ್ ಶೇಗುಣಸಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಆ.29ರಂದು ನಗರದ ಪಂಡಿತ್ ಸಿದ್ದರಾಮಯ್ಯ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಬೆಳಿಗ್ಗೆ 9.30ರಿಂದ ಸೇಂಟ್ ಥಾಮಸ್ ಬೆಂಜಿಮನ್ ಕಾಲೇಜು ಹಾಗೂ ಶಾಹೀನ್ ಕಾಲೇಜಿನ ಸಹಯೋಗದಲ್ಲಿ ಸಮಾರಂಭ ಜರುಗಲಿದೆ.

ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಸೋಮವಾರಪೇಟೆ ಹಿರೆಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ತಬಲಿಜ್ ಜಮಾತ್‌ನ ಮೌಲಾನಾ ನಿಜಾಮುದ್ದೀನ್ ರಶಾದಿ ಹಾಗೂ ಕಲ್ವರಿ ಪಾಸ್ಟರ್ ಅಸೋಸಿಯೇಷನ್ ಅಧ್ಯಕ್ಷ ರೇವ್.ಜಾನ್ ವೆಸ್ಲಿ ಡೇವಿಡ್ ಉಪಸ್ಥಿತರಿರಲಿದ್ದಾರೆ.

ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ.ಬಸವರಾಜ್ ಕಳಸ, ಪ್ರೊ.ಪರಮೇಶ್ವರ ಸಾಲಿಮಠ, ನಿವೃತ್ತ ಪ್ರಾಚಾರ್ಯ ಪ್ರೊ.ಯಂಕಣ್ಣ ಪ್ರಮುಖರಾದ ನರಸಿಂಹಲು ವಡವಾಟಿ, ರಾಮಚಂದ್ರಪ್ರಭು, ಕೇಶವರೆಡ್ಡಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಬಾಬುರಾವ್ ತಿಳಿಸಿದರು.

ಈ ಸಂದರ್ಭದಲ್ಲಿ ಸೇಂಟ್ ಥಾಮಸ್ ಬೆಂಜಿಮನ್ ಕಾಲೇಜಿನ ಪ್ರಾಚಾರ್ಯ ಪ್ರೊ.ಬೆಂಜಿಮನ್ ಥಾಮಸ್, ಶಾಹೀನ್ ಕಾಲೇಜಿನ ಪ್ರಾಚಾರ್ಯ ಪ್ರೊ.ಆದೀಲ್, ಪ್ರಮುಖರಾದ ಶರಣಪ್ಪ ನಂದಿಹಾಳ, ಭರಮರೆಡ್ಡಿ ಸೇರಿದಂತೆ ಇತರರಿದ್ದರು.