ರಾಯಚೂರಿನ ರಾಜೇಂದ್ರ ಗಂಜ್‌ನಲ್ಲಿ ಮುನ್ನೂರು ಕಾಪು ಸಮಾಜದಿಂದ ಏರ್ಪಡಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಸೋಮವಾರ ನಡೆದ 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎತ್ತುಗಳು. 
ಜಿಲ್ಲೆ

ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

ರಾಯಚೂರು: ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಸೋಮವಾರ ಚಾಲನೆ ದೊರೆತಿದ್ದು ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ಕಣ್ಮನ ಸೆಳೆಯುವಂತಿತ್ತು. ಎತ್ತುಗಳ ಬಲ ಪ್ರದರ್ಶನಕ್ಕೆ ಸೇರಿದ್ದ ಜನರು ಹರ್ಷೋದ್ಘಾರದ ಮೂಲಕ ಪ್ರೋತ್ಸಾಹ ನೀಡಿದರು.

ಕಾರಹುಣ್ಣಿಮೆ ನಿಮಿತ್ತ ಮುನ್ನೂರು ಕಾಪು ಸಮಾಜದಿಂದ ಪ್ರತಿವರ್ಷ ನಡೆಸಲಾಗುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಸ್ಥಳೀಯ ರಾಜೇಂದ್ರ ಗಂಜ್‌ನಲ್ಲಿ ನಡೆಸುವ ಜನಪದ ಕ್ರೀಡೆಗಳು ರಾಜ್ಯದ ಗಮನ ಸೆಳೆದಿದೆ. ಅದರಲ್ಲೂ ರೈತಾಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ.

ರಾಜೇಂದ್ರ ಗಂಜ್‌ನಲ್ಲಿ ಮೊದಲ ದಿನ ಕರ್ನಾಟಕದ ಎತ್ತುಗಳಿಗೆ ಮಾತ್ರ ಅವಕಾಶವಿದ್ದು 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳ 13 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಭಾರದ ಕಲ್ಲನ್ನು ಎಳೆಯುವ ಮೂಲಕ ಗಜ ಗಾತ್ರದ ಎತ್ತುಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ಡಿ.ಕೆ.ಅರುಣಾ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ. ಮುನ್ನೂರು ಕಾಪು ಸಮಾಜ ರೈತರ ಉತ್ಸವ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.