ಜಿಲ್ಲೆ

ಪಂಚಾಯತಿ ಹಣ ದುರುಪಯೋಗ: ಗ್ರಾಮ ಪಂಚಾಯತ್ ಸದಸ್ಯರಿಂದ ಸಿಇಒಗೆ ದೂರು

ರಾಯಚೂರು: ತಾಲೂಕಿನ ಜಾಗೀರ್ ವೆಂಕಟಾಪುರ ಗ್ರಾಮ ಪಂಚಾಯತಿಯ 15ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಲು ಸಾಮಾನ್ಯ ಸಭೆ ಜರುಗಿಸದೇ ನಿಯಮ ಉಲ್ಲಂಘಿಸಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರು ನಗರದ ಜಿ.ಪಂ ಕಚೇರಿಯಲ್ಲಿ ಸಿಇಒ ರಾಹುಲ್ ತುಕಾರಾಂ ಪಾಂಡ್ವೆಗೆ ಸೋಮವಾರ ದೂರು ಸಲ್ಲಿಸಿದರು.

ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಯಬೇಕೆಂದು ಸರ್ಕಾರ ಆದೇಶಿಸಿದ್ದು, ಆದರೆ ಜಾ.ವೆಂಕಟಾಪುರ ಗ್ರಾಮದಲ್ಲಿ 15ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆಯನ್ನು ರೂಪಿಸಲು ಸಾಮಾನ್ಯ ಸಭೆ ಜರುಗಿಸದೇ ಏಕಾಧಿಪತ್ಯದಿಂದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ದೂರಿದರು.

ಗ್ರಾ.ಪಂ ಸದಸ್ಯರ ಗಮನಕ್ಕೆ ತರದೇ ಅಧಿಕಾರಿಗಳು ತಮಗೆ ಬೇಕಾದ ಏಜೆನ್ಸಿಗಳಿಗೆ ಅನುದಾನವನ್ನು ವರ್ಗಾವಣೆ ಮಾಡಿಕೊಂಡಿರುತ್ತಾರೆ. ಕೂಡಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ 15ನೇ ಹಣಕಾಸು ಯೋಜನೆ ಖಾತೆಯ ಹಣವನ್ನು ವರ್ಗಾವಣೆ ಮಾಡದಂತೆ ಸೂಚನೆ ನೀಡಬೇಕು. ಸಾಮಾನ್ಯ ಸಭೆಯಲ್ಲಿ ಪಂಚಾಯತ್ ಸದಸ್ಯರೊಂದಿಗೆ ಚರ್ಚಿಸಿ ಎಲ್ಲರ ಒಪ್ಪಿಗೆ ಪಡೆದು ನಂತರ ಅನುದಾನವನ್ನು ಬಳಕೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಶಿಕಲಾ, ಸುನಿತಾ, ಲಕ್ಷ್ಮೀ, ಹನುಮಂತಮ್ಮ, ಗಾಯತ್ರಿ, ಜಯದೇವಿ, ಪಾರ್ವತಿ, ತಾಯಮ್ಮ, ಪಾರ್ವತಮ್ಮ ಸೇರಿದಂತೆ ಇತರರಿದ್ದರು.