ಜಿಲ್ಲೆ

ಹಿರಿಯ ನಾಗರಿಕರ ಮಾರ್ಗದರ್ಶನ ಅಗತ್ಯ; ನಗರ ಶಾಸಕ ಡಾ. ಶಿವರಾಜ ಪಾಟೀಲ್ ಹೇಳಿಕೆ


ನಿವೃತ್ತ ಅಧಿಕಾರಿಗಳಿಗೆ ಸನ್ಮಾನ

ರಾಯಚೂರು: ಮುಂದಿನ ದಿನಗಳಲ್ಲಿ ನಗರದಲ್ಲಿ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುವ ಹಿರಿಯ ನಾಗರಿಕರ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

ಸ್ಥಳೀಯ ಕನ್ನಡ ಭವನದಲ್ಲಿ ಇಪಿಎಸ್ 95 ಭವಿಷ್ಯ ನಿಧಿ ನಿವೃತ್ತ ಪಿಂಚಣಿದಾರರ ಸಮನ್ವಯ ಸಮಿತಿ ವಾರ್ಷಿಕ ಸಮಾವೇಶ ಹಾಗೂ ನಿವೃತ್ತ ಅಧಿಕಾರಿಗಳಿಗೆ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರ ಮಾರ್ಗದರ್ಶನ ಎಲ್ಲರಿಗೂ ಅವಶ್ಯ ಎಂದರು.

ವೃತ್ತಿ ಜೀವನದಲ್ಲಿ ಎಲ್ಲರಿಗಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಿರಿಯ ನಾಗರಿಕರು ಸಂತೋಷವಾಗಿ ಕಾಲ ಕಳೆಯಲು ಗ್ರಂಥಾಲಯ ಸೇರಿ ಅಗತ್ಯ ಮೂಲ ಸೌಕರ್ಯ ಹೊಂದಿರುವಂತಹ ಭವನವನ್ನು ನಿರ್ಮಿಸುವ ಕನಸು ಹೊಂದಿದ್ದೇನೆ ಎಂದು ಹೇಳಿದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ನೌಕರರು ನಿವೃತ್ತಿ ಹೊಂದಿದ ನಂತರ ಪಿಂಚಣಿಗಾಗಿ ಸರ್ಕಾರಿ ಕಚೇರಿಗೆ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ನೌಕರರ ಮನೆಗಳಿಗೆ ತೆರಳಿ ಪಿಂಚಣಿ ತಲುಪಿಸುವ ವ್ಯವಸ್ಥೆಯಾಗಬೇಕು ಎಂದರು.

ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಇಪಿಎಸ್ 95 ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ವೀರಭದ್ರಯ್ಯ ಹಸಮಕಲ್, ಪದಾಧಿಕಾರಿಗಳಾದ ಬಸವರಾಜ ಪಾಟೀಲ್, ಎಂ.ಎಂ.ಪಾಟೀಲ್, ಭೀಮಸೇನರಾವ್, ಎ.ವೀರಭದ್ರಪ್ಪ, ರುದ್ರಯ್ಯ ಗುಣಾರಿ ಇದ್ದರು.